ಹಾಸನ: ನಗರದ ನೆಹರು ರಸ್ತೆಯ ಒಡನಾಡಿ ಚಿತ್ರಕಲಾ ಬಳಗವು ಕಳೆದ ಹತ್ತಾರು ವರ್ಷಗಳಿಂದ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. ಈ ವರ್ಷದ ಸ್ಪರ್ಧೆಯನ್ನು ಜೂನ್ 14ರಂದು ಹಾಸನಾಂಬ ಕಲಾಕ್ಷೇತ್ರದ ಹೊರಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಸ್ಪರ್ಧೆಯ ಸಂದರ್ಭದಲ್ಲಿ ಒಡನಾಡಿ ಚಿತ್ರಕಲಾ ಬಳಗದ ಚಿತ್ರಕಲಾ ಶಿಕ್ಷಕ ವಸಂತಕುಮಾರ್, ಸಾಹಿತಿ ಗೊರೂರು ಅನಂತರಾಜು, ಕದಂಬ ಸೈನ್ಯ ಹಾಸನ ಜಿಲ್ಲಾ ಅಧ್ಯಕ್ಷ ಪ್ರೊ. ಗಣೇಶ್ ಅಂಕಪುರ ಹಾಗೂ ಗೋಡೆ ಬರಹಗಾರ ಯಾಕೂಬ್ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಶುಭ ಹಾರೈಸಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ಹಾಗೂ ಚಿತ್ರಕಲಾ ಶಿಕ್ಷಕ ವಸಂತಕುಮಾರ್ ಅವರ ಇತ್ತೀಚಿನ ಕಲಾಕೃತಿಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಜೂನ್ 21, 2026ರಂದು ಭಾನುವಾರ ಬೆಳಿಗ್ಗೆ 10.40ಕ್ಕೆ ಹಾಸನಾಂಬ ಕಲಾಕ್ಷೇತ್ರದ ಹೊರಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಬೂಕರ್ ಪ್ರಶಸ್ತಿ ವಿಜೇತ ಕಥೆಗಾರ್ತಿ ಶ್ರೀಮತಿ ಭಾನು ಮುಸ್ತಾಕ್ ಉದ್ಘಾಟಿಸಲಿದ್ದಾರೆ. ಖ್ಯಾತ ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ಬಹುಮಾನ ವಿತರಣೆ ನೆರವೇರಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿಗಳಾದ ಹೆಬ್ಬಾಲೆ ಕೆ. ನಾಗೇಶ್ ಹಾಗೂ ಗೊರೂರು ಅನಂತರಾಜು, ನಿವೃತ್ತ ಪ್ರಾಂಶುಪಾಲ ಎ.ಎಚ್. ಗಣೇಶ್ ಅಂಕಪುರ, ಗಾಯಕ ಗ್ಯಾರಂಟಿ ರಾಮಣ್ಣ, ಸುನಂದ ಕೃಷ್ಣ ಮತ್ತು ಯಾಕೂಬ್ ಅವರು ಭಾಗವಹಿಸಲಿದ್ದಾರೆ ಎಂದು ಒಡನಾಡಿ ಚಿತ್ರಕಲಾ ಬಳಗದ ಪ್ರಕಟಣೆ ತಿಳಿಸಿದೆ.
