ತುಮಕೂರು : ಕರ್ನಾಟಕ ಸರ್ಕಾರವು ಸಾರ್ವಜನಿಕರಿಗೆ ಇ ಚಲನ್ ದಂಡ ಪಾವತಿಯಲ್ಲಿ ಮಹತ್ವದ ಸಡಿಲಿಕೆ ನೀಡಿದ್ದು ಜೂ.21ರಿಂದ ಜು.10ರವರೆಗೆ ಶೇ.50ರಷ್ಟು ಮಾತ್ರ ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಬಿ.ಜಯಂತ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ಗಳಲ್ಲಿ ಹಾಗೂ ಸಾರಿಗೆ ಇಲಾಖೆಯ ಬಾಕಿ ಪ್ರಕರಣಗಳಲ್ಲಿ ವಿಧಿಸಲಾದ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವಂತೆ ಆದೇಶ ಹೊರಡಿಸಲಾಗಿದೆ.ಈ ರಿಯಾಯಿತಿ ಮೇ-2026ರೊಳಗೆ ಪೊಲೀಸ್ ಇಲಾಖೆಯ ಇ-ಚಲನ್ಗಳಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳು ಹಾಗೂ 1991ರಿಂದ 2022ರವರೆಗೆ ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಮತ್ತು ಪಾವತಿಗೆ ಬಾಕಿ ಇರುವ ಪ್ರಕರಣಗಳಿಗೆ ಅನ್ವಯವಾಗುತ್ತದೆ ಸಾರ್ವಜನಿಕರು ತಮ್ಮ ಬಾಕಿ ದಂಡಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜೂನ್ 21 ರಿಂದ ಜುಲೈ 10 ರವರೆಗೆ (20 ದಿನಗಳು) ಕಾಲಾವಕಾಶ ನೀಡಲಾಗಿದೆ ಎಂದೂ ಅವರು ತಿಳಿಸಿದರು.
ಲೋಕ್ ಅದಾಲತ್ ಗೆ ಆಹ್ವಾನ:
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಜುಲೈ 11 ಎರಡನೇ ಶನಿವಾರದಂದು ತುಮಕೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗುತ್ತಿದೆ. ಇದೇ ವೇಳೆ, ಜುಲೈ 18 ರಂದು ಚೆಕ್ಕು ಅಮಾನ್ಯದ (ಎನ್.ಐ.ಆಕ್ಟ್) ಪ್ರಕರಣಗಳಿಗೆ ವಿಶೇಷ ಲೋಕ್ ಅದಾಲತ್ ನಡೆಯಲಿದೆ ಎಂದು ಅವರು ತಿಳಿಸಿದರು.
ವೇಗವಾದ ನ್ಯಾಯ ಕಡಿಮೆ ವೆಚ್ಚ.
ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ತ್ವರಿತವಾಗಿ ಹಾಗೂ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಜೊತೆಗೆ ಪಕ್ಷಗಾರರ ಮಧ್ಯೆ ಸೌಹಾರ್ದತೆ ಹೆಚ್ಚುತ್ತದೆ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ ಎಂದರು.
ಗಣನೀಯ ವಿಲೇವಾರಿ
2026ರಲ್ಲಿ ನಡೆದ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ತುಮಕೂರು ಜಿಲ್ಲೆಯಾದ್ಯಂತ ಒಟ್ಟು 3,23,859 ಪ್ರಕರಣಗಳಲ್ಲಿ ಮಹತ್ತರ ಪ್ರಮಾಣದ ಪ್ರಕರಣಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಎಂದೂ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ್ ಧನಪಾಲ ಹವಲೆ ಮಾತನಾಡುತ್ತಾ ಕಕ್ಷಿದಾರರು ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಪ್ರಕರಣಗಳಲ್ಲಿ ಕಕ್ಷಿದಾರರು ರಾಜಿಯಾಗಬಹುದು,ಲೋಕ್ ಅದಾಲತ್ ನಲ್ಲಿ ರಾಜಿಯಾದ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶವಿರುವುದಿಲ್ಲ,ಈ ಅವಕಾಶವನ್ನು ಕಕ್ಷಿದಾರರು,ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಕೇಸುಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
