ಬೆಂಗಳೂರು : ಕನ್ನಡ ದಾಸ ಸಾಹಿತ್ಯ ಪರಂಪರೆಯನ್ನು ಜನಸಾಮಾನ್ಯರಿಗೆ ಪರಿಚಯಿಸುವ ಕೆಲಸವನ್ನು ಇನ್ನಷ್ಟು ಸರಳೀಕರಣ ಮಾಡಬೇಕೆಂದು ಸೇಡಂ ನ ದಾಸಧೇನು ಟ್ರಸ್ಟ್ ನ ಅಧ್ಯಕ್ಷರಾದ ಡಾ.ವಾಸುದೇವ ಅಗ್ನಿಹೋತ್ರಿ ಅವರು ಅಭಿಪ್ರಾಯಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸ್ನೇಹ ಕೂಟ ಸಾಂಸ್ಕೃತಿಕ ವೇದಿಕೆಯು ಸೇಡಂನ ದಾಸಧೇನು ಟ್ರಸ್ಟ್ ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಾಸಸಾಹಿತ್ಯವನ್ನು ಸಂವರ್ಧನೆಗೆ ಸೇವೆ ಸಲ್ಲಿಸುತ್ತಿರುವ ಲೇಖಕ, ವಿಜಯಾ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಆರ್.ವಾದಿರಾಜು ಮತ್ತು ವಿ.ಲಕ್ಷ್ಮೀ ದಂಪತಿಗೆ ” ದಾಸ ಶ್ರೇಷ್ಠ ದಂಪತಿ” ಪ್ರಶಸ್ತಿ ಪ್ರದಾನ ಮತ್ತು ಸಾಹಿತಿ ಕೂ.ಗಿ.ಗಿರಿಯಪ್ಪನವರು ರಚಿಸಿರುವ ಕರುನಾಡ ದಾಸಸಾಹಿತಿಗಳು ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಸಂಸ್ಕೃತಿಗೆ ಹದಿಮೂರನೇ ಶತಮಾನದಲ್ಲಿ ಆರಂಭಗೊಂಡ ಈ ಸಾಹಿತ್ಯ ಪ್ರಕಾರವು ಜಗತ್ತಿನ ಎಲ್ಲಾ ಭಾಷೆಗಳಿಗೂ ಮಿಗಿಲಾಗಿ ಭಾವಗೀತೆ ಭಕ್ತಿಗೀತೆ ಸಂಗೀತದ ಮೂಲಕ ಮೆರುಗು ನೀಡಿದೆ.ಹಾಗಾಗಿ ಈ ಸಾಹಿತ್ಯವನ್ನು ಜನಸಾಮಾನ್ಯರಿಗೆ ಅರ್ಥವಾಗುವ, ತಿಳಿಸಿಕೊಡಲು ಶಾಲಾ ಕಾಲೇಜುಗಳಲ್ಲಿ ದಾಸಸಾಹಿತ್ಯ ಸಂಗೀತದ ಪರಿಚಯಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ.ಸುರೇಶ್ ಪಾಟೀಲರು ವಹಿಸಿ ಡಾ.ವಾದಿರಾಜರು ಕನ್ನಡ ಸಾಹಿತ್ಯ ಸಂಘಟನೆ, ಭಾಷೆ, ವಿಮರ್ಶೆ, ಸಜ್ಜನ ಸ್ನೇಹಿತರ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಹೃದಯಿ ಸ್ನೇಹಮಯಿ ಮನಸ್ಸುಳ್ಳವರು ಎಂದರು.

ವೇದಿಕೆಯಲ್ಲಿ ಡಾ.ಆರ್.ವಾದಿರಾಜು ಅವರು ಅಭಿನಂದನೆ ಸ್ವೀಕರಿಸಿ ತಮ್ಮ ಸಾಹಿತ್ಯ ಸಂಸ್ಕೃತಿ ಸಾಧನೆಗೆ ಸಹಾಯ ಸಹಕಾರ ಪ್ರೋತ್ಸಾಹ ನೀಡಿದ ತಂದೆ ತಾಯಿ ಗುರು ಸ್ನೇಹಿತರನ್ನು ಸ್ಮರಿಸಿದರು. ವಿಜಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಸಿ.ಶಿವರಾಮಯ್ಯನವರನ್ನು ಗೌರವಿಸಲಾಯಿತು. ಲೋಕಾರ್ಪಣೆಗೊಂಡ ಲೇಖಕ ಕೂ.ಗಿ.ಗಿರಿಯಪ್ಪ, ಖಜಾನೆ ಇಲಾಖೆಯ ಶ್ರೀಮತಿ ಸಿ.ಹೇಮಾವತಿಸಿಸಿರಾ, ಪ್ರಾಧ್ಯಾಪಕ ಡಾ.ಚೌಡಯ್ಯ, ಗಾಯಕ ವೆಂಕಟರಾಂಭಾರತಿ ಇದ್ದರು. ವಿಶೇಷ ಕವಿಗೋಷ್ಠಿಯ ಜೊತೆಗೆ ದಾಸ ವಿಜಯ ಸಮ್ಮಿಲನ, ಶ್ರೀ ಕೃಷ್ಣ ಭಜನಾ ಮಂಡಳಿ, ಶೃಂಗೇರಿ ನಿಲಯೇ ಭಜನಾ ಮಂಡಳಿ ಅವರ ಹತ್ತಾರು ಕೀರ್ತನೆಗಳನ್ನು ಹಾಡಿ ರಂಜಿಸಿದರು.
