ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ವೈಭವ ಹಾಸನ, ರಂಗಸಿರಿ ಹಾಗೂ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳಲ್ಲಿ ನಾಲ್ಕು ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು.
ಏಪ್ರಿಲ್ 14ರಂದು ಜ್ಞಾನಧಾರ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕೋಟಿಗಾನಹಳ್ಳಿ ರಾಮಯ್ಯ ರಚನೆಯ “ನನ್ನ ಅಂಬೇಡ್ಕರ್” ನಾಟಕವನ್ನು ಬಾಬಾಸಾಹೇಬ್ ಕಾಂಬಳೆ ಅವರ ಸಂಗೀತ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಏಪ್ರಿಲ್ 15ರ ಬೆಳಿಗ್ಗೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ನಿಕೊಲಾಯ್ ಗೊಗೊಲ್ ಅವರ ಕೃತಿಯ ಕನ್ನಡ ರೂಪಾಂತರವನ್ನು ಧನಂಜಯ ದಿಯಾನ್ ಅವರ ಸಂಗೀತ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಅದೇ ದಿನ ಮಧ್ಯಾಹ್ನ ಸಕಲೇಶಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಡಾ. ಎಂ. ಬೈರೇಗೌಡ ರಚನೆಯ “ಸರಸತಿಯಾಗಲೊಲ್ಲೆ” ನಾಟಕವನ್ನು ಪ್ರದರ್ಶಿಸಿದರು. ಏಪ್ರಿಲ್ 16ರಂದು ಬೆಳಿಗ್ಗೆ ಸೆಂಟ್ರಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಸನದ ಜಿ. ಪ್ರಕಾಶ್ ಅವರ “ನನ್ಸಿರಿ” ಕಾದಂಬರಿಯನ್ನು ಆಧರಿಸಿದ ನಾಟಕವನ್ನು ಧನಂಜಯ ದಿಯಾನ್ ಅವರ ರಂಗರೂಪ, ಸಂಗೀತ ಮತ್ತು ನಿರ್ದೇಶನದಲ್ಲಿ ಪ್ರದರ್ಶಿಸಿದರು.

“ಸರಸತಿಯಾಗಲೊಲ್ಲೆ” ನಾಟಕವು ಸಾವಿತ್ರಿಬಾಯಿ ಪುಲೆ ಮತ್ತು ಅವರ ಪತಿ ಜ್ಯೋತಿಬಾ ಪುಲೆ ಅವರ ಜೀವನಾಧಾರಿತ ಕೃತಿ. ಸಾಮಾನ್ಯವಾಗಿ ಇಂತಹ ಜೀವನಾಧಾರಿತ ನಾಟಕಗಳು ನಿರೂಪಕ ಅಥವಾ ಸೂತ್ರಧಾರರ ಮೂಲಕ ನಿರೂಪಿಸಲ್ಪಡುತ್ತವೆ. ಈ ನಾಟಕದಲ್ಲಿ ಇಬ್ಬರು ನಿರೂಪಕಿಯರ ಮೂಲಕ ಕಥಾ ನಿರೂಪಣೆ ಸಾಗುತ್ತದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂವ್ನಲ್ಲಿ 1831ರ ಜನವರಿ 3ರಂದು ಸಾವಿತ್ರಿಬಾಯಿ ಜನಿಸಿದರೆಂದು ತಿಳಿಸಲಾಗುತ್ತದೆ. ಬಾಲ್ಯ ವಿವಾಹ ಪದ್ಧತಿ ರೂಢಿಯಲ್ಲಿದ್ದ ಆ ಕಾಲದಲ್ಲಿ, 9ನೇ ವಯಸ್ಸಿನಲ್ಲಿ 13 ವರ್ಷದ ಜ್ಯೋತಿರಾವ್ ಪುಲೆ ಅವರೊಂದಿಗೆ ವಿವಾಹವಾಗುತ್ತಾರೆ.
ನಾಟಕದ ದೃಶ್ಯಗಳು ಇಲ್ಲಿ ಪ್ರಾರಂಭವಾಗುತ್ತವೆ. ಮದುವೆಯ ಸಂಪ್ರದಾಯದ ವೇಳೆ ವರಪಕ್ಷದಿಂದ 50 ರೂ. ನೀಡುವುದಾಗಿ ಹೇಳಿದಾಗ, ವಧುಪಕ್ಷವು 100 ರೂ. ಕೇಳುವ ಪ್ರಸಂಗದಲ್ಲಿ ಜ್ಯೋತಿಬಾ ಪುಲೆ ವಿರೋಧ ವ್ಯಕ್ತಪಡಿಸುವುದು ಅವರ ವ್ಯಕ್ತಿತ್ವವನ್ನು ತೆರೆದಿಡುತ್ತದೆ. ಜ್ಯೋತಿಬಾ ಪುಲೆ ಮಹಾರಾಷ್ಟ್ರದ ಕಟ್ಗುನ್ ಗ್ರಾಮದಲ್ಲಿ ಗೋವಿಂದರಾವ್ ಮತ್ತು ಜಿಮ್ನಾಬಾಯಿ ದಂಪತಿಗಳ ಪುತ್ರರು. ಅವರು ಪುಣೆಯ ಸ್ಕಾಟಿಷ್ ಮಿಷನ್ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪಾಶ್ಚಾತ್ಯ ಚಿಂತಕ ಥಾಮಸ್ ಪೇನ್ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು.

ವಿವಾಹದ ನಂತರ ಸಾವಿತ್ರಿಬಾಯಿ ಅವರಿಗೆ ಪತಿ ಜ್ಯೋತಿಬಾ ಅವರೇ ಮೊದಲ ಗುರು. 1847ರಲ್ಲಿ ಅವರು ಶಿಕ್ಷಕಿಯ ತರಬೇತಿಯನ್ನು ಪಡೆದು ಮಹಾರಾಷ್ಟ್ರದ ಮೊದಲ ತರಬೇತಿ ಪಡೆದ ಮಹಿಳಾ ಶಿಕ್ಷಕಿಯಾಗಿದ್ದಾರೆ. 1848ರಲ್ಲಿ ಪುಣೆಯ ಭಿಡೆವಾಡಾದಲ್ಲಿ ಹೆಣ್ಣುಮಕ್ಕಳಿಗಾಗಿ ಮೊದಲ ಶಾಲೆಯನ್ನು ಸ್ಥಾಪಿಸಿದರು. ಮೇಲ್ವರ್ಗದ ವಿರೋಧ, ಅವಮಾನಗಳ ನಡುವೆಯೂ ಅವರು ಶಿಕ್ಷಣ ಸೇವೆಯನ್ನು ಮುಂದುವರಿಸಿದರು.
ಸಾವಿತ್ರಿಬಾಯಿ ಪುಲೆ ಮಹಿಳೆಯರ ಸಮಾನ ಹಕ್ಕಿಗಾಗಿ ಹೋರಾಡಿದ ಪ್ರಮುಖ ವ್ಯಕ್ತಿ. ಬಾಲ್ಯ ವಿವಾಹ, ಸತಿ ಪದ್ಧತಿ, ಕೇಶಮುಂಡನ ಮುಂತಾದ ಅನಿಷ್ಠ ಪದ್ಧತಿಗಳ ವಿರುದ್ಧ ಅವರು ಹೋರಾಡಿದರು. ಮಹಿಳೆಯರಿಗಾಗಿ ಶಾಲೆಗಳು ಮತ್ತು ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿದರು. ಬ್ರಿಟಿಷ್ ಸರ್ಕಾರವು ಅವರಿಗೆ “India’s First Lady Teacher” ಎಂಬ ಗೌರವ ನೀಡಿರುವುದು ಗಮನಾರ್ಹ.

1888ರಲ್ಲಿ ಮುಂಬೈನಲ್ಲಿ ನಡೆದ ಸಭೆಯಲ್ಲಿ ವಿಠಲರಾವ್ ಕೃಷ್ಣಾಜಿ ವಂದೇಕರ್ ಅವರು ಜ್ಯೋತಿಬಾ ಪುಲೆ ಅವರಿಗೆ “ಮಹಾತ್ಮ” ಎಂಬ ಬಿರುದು ನೀಡಿದರು. ಜ್ಯೋತಿಬಾ ಪುಲೆ 1890ರ ನವೆಂಬರ್ 28ರಂದು ನಿಧನರಾದರು. 1897ರಲ್ಲಿ ಪ್ಲೇಗ್ ರೋಗಿಗಳಿಗೆ ಸೇವೆ ಸಲ್ಲಿಸುವಾಗ ಸಾವಿತ್ರಿಬಾಯಿ ಪುಲೆ ಸೋಂಕಿಗೆ ಒಳಗಾಗಿ ವಿಧಿವಶರಾದರು.
ಈ ದಂಪತಿಯ ಜೀವನ ಚರಿತ್ರೆಯನ್ನು ವೈ. ಮಂಜುನಾಥ ಸಿರಿಗೇರಿ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ರಂಗಮಂಚದ ಮೇಲೆ ಮೂಡಿಸಲಾಯಿತು. ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದವರು. ನೀನಾಸಂನಲ್ಲಿ ತರಬೇತಿ ಪಡೆದ ಅವರು, ಜನಮನದಾಟ, ಮೈಸೂರು ರಂಗಾಯಣ ಹಾಗೂ ನೀನಾಸಂ ತಿರುಗಾಟದಲ್ಲಿ ನಟರಾಗಿ ಕಾರ್ಯನಿರ್ವಹಿಸಿ, ಇದೀಗ ನಿರ್ದೇಶಕರಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ನಾಟಕದಲ್ಲಿ ಜ್ಯೋತಿಬಾ ಪುಲೆ ಪಾತ್ರದಲ್ಲಿ ವಿಶ್ವಾಸ್ ಸ್ಪಷ್ಟ ಮಾತುಗಾರಿಕೆಯಿಂದ ಭರವಸೆ ಮೂಡಿಸಿದರೆ, ಸಾವಿತ್ರಿಬಾಯಿ ಪಾತ್ರದಲ್ಲಿ ಪೀತಿ ಸಂಜನಾ ತಮ್ಮ ಅಭಿನಯದಿಂದ ಮೆಚ್ಚುಗೆ ಪಡೆದರು. ನಿರೂಪಕಿಯರಾಗಿ ಸಾಂಘವಿ ಮತ್ತು ಪವಿತ್ರ, ಲಕ್ಷ್ಮೀಬಾಯಿ ಪಾತ್ರದಲ್ಲಿ ಸುಕನ್ಯ, ಸುಗುಣಬಾಯಿ ಪಾತ್ರದಲ್ಲಿ ಸಿಂಚನ, ಖಂಡೋಜಿ ಹಾಗೂ ಬ್ರಾಹ್ಮಣ ಪಾತ್ರಗಳಲ್ಲಿ ಅರುಣ್ ಕುಮಾರ್ ಮತ್ತು ದಿಲನ್ ಉತ್ತಮ ಅಭಿನಯ ನೀಡಿದರು.
ಸಹ ನಿರ್ದೇಶನ ಜಿ.ಎಂ. ವಿಜಯ್ ಕುಮಾರ್ ಸಿರಿಗೇರಿ ಹಾಗೂ ಬೆಳಕು ನಿರ್ವಹಣೆ ಅಂಬರೀಶ್ ಸಿರಿಗೇರಿ ವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಅಭಿನಯವನ್ನು ಶ್ಲಾಘಿಸಿದರು.
ನಾನು (ಗೊರೂರು ಅನಂತರಾಜು) ಈ ರಂಗಪ್ರಯೋಗದ ಹಿಂದೆ ಕಾರ್ಯನಿರ್ವಹಿಸಿದ ಶಾಡ್ರಕ್ ಮೇಷ್ಟ್ರು ಅವರ ರಂಗನೇಪಥ್ಯದ ಕೆಲಸಗಳನ್ನು ಸ್ಮರಿಸುತ್ತೇನೆ. ರಂಗಸಿರಿ ತಂಡ ಹಾಸನದಲ್ಲಿ ಪ್ರದರ್ಶಿಸಿದ ನಾಟಕಗಳ ವಿಮರ್ಶೆಗಳು ನನ್ನ “ರಂಗಪ್ರಯೋಗ” ಮತ್ತು “ರಂಗಸಿರಿ ಕಥಾ ಐಸಿರಿ” ಕೃತಿಗಳಲ್ಲಿಯೂ ದಾಖಲಾಗಿವೆ.
— ಗೊರೂರು ಅನಂತರಾಜು, ಹಾಸನ
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣಿ,
29ನೇ ವಾರ್ಡ್, 3ನೇ ಕ್ರಾಸ್, ಹಾಸನ.
