ಕೊರಟಗೆರೆ: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರಕ್ತಹೀನತೆ (ಅನಿಮಿಯಾ) ಕುರಿತು ಅರಿವು ಹೆಚ್ಚಿಸುವುದು ಕಾಲದ ಅವಶ್ಯಕತೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ದ್ರಾಕ್ಷಾಯಿಣಿ ರಾಜಣ್ಣ ಹೇಳಿದರು.
ಪಟ್ಟಣದ ಅದ್ವೈತ ಕಲ್ಯಾಣ ಮಂಟಪದಲ್ಲಿ ತುಮಕೂರಿನ ಸಿದ್ಧಾರ್ಥ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHO), ಕೊರಟಗೆರೆ ತಾಲೂಕು ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಶ್ರೀಮದ್ ರಾಜಚಂದ್ರ ಸಂಶೋಧನ ಸಂಸ್ಥೆ, ಗುಜರಾತ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ “ಅನಿಮಿಯಾ ತಡೆಗಟ್ಟುವಿಕೆ ಮತ್ತು ಜಾಗೃತಿ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿದ್ಧಾರ್ಥ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ರತ್ನಪ್ರಭಾ ಅವರು, ವಿದ್ಯಾರ್ಥಿ ದಶೆಯಿಂದಲೇ ಪೌಷ್ಟಿಕ ಆಹಾರದ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಅನಿಮಿಯಾ ದೈಹಿಕ ಬೆಳವಣಿಗೆ ಮಾತ್ರವಲ್ಲದೆ ಬೌದ್ಧಿಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಈ ಶಿಬಿರದಲ್ಲಿ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ, ಕೊಡ್ಲಹಳ್ಳಿ, ಹರಿಹರಪ್ಪನ ಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಸಾರ್ವಜನಿಕರು ಭಾಗವಹಿಸಿ ವೈದ್ಯಕೀಯ ಸೇವೆಯ ಸೌಲಭ್ಯ ಪಡೆದರು.

ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಮಾತ್ರೆಗಳು, ಟಾನಿಕ್ಗಳು ಹಾಗೂ ಆರೋಗ್ಯ ಕಿಟ್ಗಳನ್ನು ವಿತರಿಸಲಾಯಿತು. ತಜ್ಞ ವೈದ್ಯರು ವೈಯಕ್ತಿಕ ಆರೋಗ್ಯ ಸಲಹೆಗಳನ್ನು ನೀಡಿದರು.
ಅನಿಮಿಯಾ ತಡೆಗಟ್ಟುವಿಕೆ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಮುಖರಾದ ಚನ್ನನಂಜಯ್ಯ ಅವರು, ರಕ್ತಹೀನತೆಯ ಲಕ್ಷಣಗಳು, ಹಸಿರು ಎಲೆ ತರಕಾರಿಗಳ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜು ಉಪನ್ಯಾಸಕರು, ವೈದ್ಯಕೀಯ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
