ತುಮಕೂರು: ತಾಲೂಕಿನ ಕೋರ ಹೋಬಳಿಯ ದೇವಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡುಸಿದ್ದಯ್ಯನ ಪಾಳ್ಯದಲ್ಲಿ ನೆಲೆಸಿರುವ ಶ್ರೀ ಬಸವೇಶ್ವರ ಸ್ವಾಮಿಯ 7ನೇ ವರ್ಷದ ಜಾತ್ರಾ ಮಹೋತ್ಸವವು ಏ. 20 ಸೋಮವಾರ ಹಾಗೂ ಏ. 21 ಮಂಗಳವಾರ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ, ಗ್ರಾಮದ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಸೋಮವಾರ ರಾತ್ರಿ “ಸಂಪೂರ್ಣ ರಾಮಾಯಣ” ಎಂಬ ಪೌರಾಣಿಕ ನಾಟಕವನ್ನು ಭವ್ಯವಾಗಿ ಪ್ರದರ್ಶಿಸಲಾಗುತ್ತಿದೆ. ತರೂರು ಶ್ರೀ ನಾಗೇಶ್ ಅವರ ನ್ಯೂ ಕೃಷ್ಣ ಸೀನರಿ ಶಿರಗೆಟ್ ತಂಡದಿಂದ ಅದ್ದೂರಿ ರಂಗ ಸಜ್ಜಿಕೆಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.
ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದ್ದು, ಭಕ್ತರಲ್ಲಿ ಭಕ್ತಿ ಸಂಭ್ರಮ ಮೂಡಿಸಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಜಾತ್ರಾ ಸಮಿತಿ ಕೋರಿದೆ.
– ಶ್ರೀನಿವಾಸ್ ಕೊರಟಗೆರೆ.
