ಬೆಂಗಳೂರು, ಸೆಪ್ಟೆಂಬರ್ 03:* ಬೆಂಗಳೂರಿನ ಬಹುದೊಡ್ಡ ತಲೆನೋವಾಗಿರುವ ಸಂಚಾರ ದಟ್ಟಣೆಗೆ ತಂತ್ರಜ್ಞಾನದ ಮೂಲಕ ಮುಕ್ತಿ ಕಾಣಿಸಲು ಖ್ಯಾತ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ ಮತ್ತು ಬೆಂಗಳೂರು ನಗರ ಸಂಚಾರ ಪೊಲೀಸ್ ಜಂಟಿಯಾಗಿ ವಿನೂತನ ಹೆಜ್ಜೆಯಿಟ್ಟಿದ್ದು, ನಗರದ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಗ್ರಿಡ್ಲಾಕ್ ಹ್ಯಾಕಥಾನ್ 2.0 ರಾಷ್ಟ್ರಮಟ್ಟದ ತಂತ್ರಜ್ಞಾನ ಸ್ಪರ್ಧೆಯ ಫಲಿತಾಂಶಗಳು ಇಂದು ಅಧಿಕೃತವಾಗಿ ಪ್ರಕಟಗೊಂಡಿವೆ.
ಮ್ಯಾಪ್ಮೈಇಂಡಿಯಾ, ಆರ್ಕಾಡಿಸ್ ಹಾಗೂ ಹ್ಯಾಕರ್ಅರ್ಥ್ ಸಹಯೋಗದಲ್ಲಿ ನಡೆದ ಈ ಹ್ಯಾಕಥಾನ್ನಲ್ಲಿ ದೇಶಾದ್ಯಂತದ 33,600ಕ್ಕೂ ಹೆಚ್ಚು ತಂತ್ರಜ್ಞರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಭಾಗವಹಿಸಿದ್ದರು. ನಗರ ಸಂಚಾರ ಪೊಲೀಸರ ಆಸ್ಟ್ರಾಮ್ (ಸುಸ್ಥಿರ ಸಂಚಾರ ನಿರ್ವಹಣೆಗಾಗಿ ಕ್ರಿಯಾಶೀಲ ಬುದ್ಧಿಮತ್ತೆ) ವೇದಿಕೆಯ ನೈಜ ದತ್ತಾಂಶಗಳನ್ನು ಬಳಸಿಕೊಂಡು, ಸಂಚಾರ ದಟ್ಟಣೆ ನಿವಾರಣೆಗೆ 1,100ಕ್ಕೂ ಹೆಚ್ಚು ಎಐ ಮತ್ತು ಮೆಷಿನ್ ಲರ್ನಿಂಗ್ ಮಾದರಿಗಳನ್ನು ಸ್ಪರ್ಧಿಗಳು ಅಭಿವೃದ್ಧಿಪಡಿಸಿದ್ದಾರೆ.
ನಗರದ ಒಂದು ಮೂಲೆಯಲ್ಲಿ ಸಂಭವಿಸುವ ಸಣ್ಣ ಸಂಚಾರ ಅಡಚಣೆಯು ಇಡೀ ನಗರಕ್ಕೆ ಹರಡುವುದನ್ನು ಮೊದಲೇ ಊಹಿಸಿ, ಪೊಲೀಸರು ಮುಂಚಿತವಾಗಿಯೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನೆರವಾಗುವ ಗ್ರಿಡ್ಲಾಕ್ ಒರಾಕಲ್ ತಂತ್ರಜ್ಞಾನ ರೂಪಿಸಿದ ತಂಡ ಪ್ರಥಮ ಸ್ಥಾನದೊಂದಿಗೆ ₹2.25 ಲಕ್ಷ ನಗದು ಬಹುಮಾನ ಮುಡಿಗೇರಿಸಿಕೊಂಡಿತು.
ದಟ್ಟಣೆಯ ತೀವ್ರತೆಯನ್ನು ಲೆಕ್ಕಹಾಕಿ ಬ್ಯಾರಿಕೇಡ್ಗಳು, ಪರ್ಯಾಯ ಮಾರ್ಗಗಳು ಮತ್ತು ಪೊಲೀಸ್ ಸಿಬ್ಬಂದಿಯ ಸೂಕ್ತ ನಿಯೋಜನೆಗೆ ಮಾರ್ಗದರ್ಶನ ನೀಡುವ ಪ್ರಹಾರ್ ವ್ಯವಸ್ಥೆಗೆ ದ್ವಿತೀಯ (₹1.75 ಲಕ್ಷ) ಹಾಗೂ ರಸ್ತೆಬದಿಯ ಅಕ್ರಮ ವಾಹನ ನಿಲುಗಡೆಯಿಂದಾಗುವ ದಟ್ಟಣೆಯನ್ನು ಗುರುತಿಸಿ ನಿಯಂತ್ರಿಸುವ ಪಾರ್ಕ್ಸೈಟ್ ವ್ಯವಸ್ಥೆಗೆ ತೃತೀಯ (₹1 ಲಕ್ಷ) ಬಹುಮಾನ ಲಭಿಸಿತು.
ನಗರದ ಫ್ಲಿಪ್ಕಾರ್ಟ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ವಿಜೇತರಿಗೆ ಬಹುಮಾನ ವಿತರಿಸಿದರು. ಫ್ಲಿಪ್ಕಾರ್ಟ್ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಹಿರಿಯ ಉಪಾಧ್ಯಕ್ಷ (ಕಾರ್ಯತಂತ್ರ ಸಹಭಾಗಿತ್ವ) ರವಿ ಅಯ್ಯರ್, ಪೂರೈಕೆ ಸರಪಳಿ, ಗ್ರಾಹಕ ಅನುಭವ ಮತ್ತು ಮರು-ವಾಣಿಜ್ಯ ವಿಭಾಗದ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಹಾಗೂ ಪೂರೈಕೆ ಸರಪಳಿ ತಂತ್ರಜ್ಞಾನ ವಿಭಾಗದ ಹಿರಿಯ ಉಪಾಧ್ಯಕ್ಷ ವಿನಯ್ ವೈದ್ಯ ಉಪಸ್ಥಿತರಿದ್ದರು.
ಈ ಹಿಂದೆ 2017ರಲ್ಲಿ ನಡೆದ ಮೊದಲ ಆವೃತ್ತಿಯ ಹ್ಯಾಕಥಾನ್ನಲ್ಲಿ ಗೆದ್ದ ತಂತ್ರಜ್ಞಾನವನ್ನು ಕುಖ್ಯಾತ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಇದರಿಂದ ವಾಹನ ಸವಾರರ ಕಾಯುವಿಕೆ ಅವಧಿಯಲ್ಲಿ ಸುಮಾರು ಶೇ. 17ರಷ್ಟು ಇಳಿಕೆ ಕಂಡುಬಂದಿತ್ತು. ಈಗಿನ ನೂತನ ಎಐ ಮಾದರಿಗಳು ಇಡೀ ಬೆಂಗಳೂರಿನ ಸಂಚಾರ ಜಾಲವನ್ನು ಇನ್ನಷ್ಟು ಚುರುಕುಗೊಳಿಸಲು ಸಜ್ಜಾಗಿವೆ.
*ಸಮಾರಂಭದಲ್ಲಿ ಮಾತನಾಡಿದ ಫ್ಲಿಪ್ಕಾರ್ಟ್ನ ಮುಖ್ಯ ಸಾಂಸ್ಥಿಕ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್*, “ನಗರದ ಸಂಕೀರ್ಣ ಸವಾಲುಗಳನ್ನು ಕೇವಲ ಆಡಳಿತವೊಂದೇ ಏಕಾಂಗಿಯಾಗಿ ಬಗೆಹರಿಸಲು ಸಾಧ್ಯವಿಲ್ಲ. ಸಾರ್ವಜನಿಕ ಸಂಸ್ಥೆಗಳು ಮತ್ತು ತಂತ್ರಜ್ಞಾನ ಕಂಪನಿಗಳು ಕೈಜೋಡಿಸಿದಾಗ ಇಂತಹ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಸಾಧ್ಯ,” ಎಂದು ತಿಳಿಸಿದರು.
