ಕೊರಟಗೆರೆ:- ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹಾನ್ ಋಷಿ ಹಾಗೂ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜೀವನ ಪ್ರತಿಯೊಬ್ಬರಿಗೂ ಆದರ್ಶಗಳು ಮತ್ತು ಅವರ ಸಾಹಿತ್ಯ ಸೇವೆ ಭಾರತೀಯ ಸಂಸ್ಕೃತಿಗೆ ಆಮೂಲ್ಯ ಕೊಡುಗೆಯಾಗಿದ್ದು ಅವರ ಜೀವನ ಮತ್ತು ಆದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ, ಎಂದು ತಹಶೀಲ್ದಾರ್ ಡಿ.ಪಿ.ಶರತ್ಕುಮಾರ್ ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ವಾಲ್ಮೀಕಿ ಸಮುದಾಯದ ಸಹಯೊಗದೊಂದಿಗೆ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ರವರು ತಮ್ಮ ಜ್ಞಾನ, ತಪಸ್ಸು ಮತ್ತು ಸಾಹಿತ್ಯ ಸೇವೆಯ ಮೂಲಕ ಭಾರತೀಯ ಸಂಸ್ಕೃತಿಗೆ ಆಪಾರ ಕೊಡುಗೆ ನೀಡಿದ್ದಾರೆ, ಸಮಾಜದಲ್ಲಿ ಸಮಾನತೆ, ಸಹೋದರತ್ವ, ಮಾನವೀಯತೆ ಪ್ರಮುಖ ಸಂದೇಶವಾಗಿದೆ, ಪ್ರತಿಯೊಬ್ಬರೂ ಒಳ್ಳೆಯ ಅಲೋಚನೆಗಳನ್ನು ಬೆಳೆಸಿಕೊಂಡು ಸಮಾಜದ ಅಭಿವೃಧ್ದಿಗೆ ಶ್ರಮಿಸಬೇಕು ಹಾಗೂ ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದಿ ಹೊಂದುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಪ.ಪಂ. ಮಾಜಿ ಸದಸ್ಯ ಹಾಗೂ ಸಮುದಾಯದ ಮುಖಂಡ ಕೆ.ಆರ್.ಓಬಳರಾಜು ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸರ್ಕಾರ ಶೇ.56 ನಿಗದಿ ಪಡಿಸಿದ್ದು ಆದರೆ ಕರ್ನಾಟಕ ಉಚ್ಚನ್ಯಾಯಾಲಯ ರದ್ದು ಪಡಿಸಿದ್ದು ಮೀಸಲಾತಿ ಪಡೆಯುವ ಎಲ್ಲಾ ಸಮುದಾಯಗಳಿಗೆ ಅನ್ಯಾಯವಾಗಿದ್ದು ಈ ಆದೇಶದ ವಿರುದ್ದು ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಶೇ.56 ಮೀಸಲಾತಿಯ ಕಾಯ್ದೆ ಸಂವಿಧಾನದ 9ನೇ ಷೆಡ್ಯೂಲ್ನಲ್ಲಿ ಸೇರಿಸಬೇಕು ಎಂದು ಒತ್ತಯಿಸಿದರು.
ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ರಾಜ್ಯ ಉಪಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ರವರು ಸರ್ಕಾರದಿಂದ 30 ಗುಂಟೆ ಜಮೀನು ಮೂಂಜೂರು ಮಾಡಿಸಿದ್ದ ಅದರಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು ಕಾಮಗಾರಿ ಪಗ್ರತಿಯಲ್ಲಿದ್ದು ಭವನ ಪೂರ್ಣಗೊಳ್ಳಲು ಇನ್ನು 1.90 ಕೋಟಿ ರೂ ಅನುದಾನ ಅವಶ್ಯಕವಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ತಾಹಶೀಲ್ದಾರ್ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಸಬೇಕೆಂದು ಹಾಗೂ ಡಾ.ಅಂಬೇಡ್ಕರ್ ಭವನ, ಬಾಬು ಜಗಜೀವನ್ರಾಂ ಭವನ ನಿರ್ಮಾಣಕ್ಕೂ ಅನುದಾನ ಬಿಡುಗಡೆ ಮಾಡಿಸಿ ಸಮುದಾಯ ಭವನಗಳ ನಿರ್ಮಾಣ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
ಸಮಾಜದ ಮಹಿಳಾ ಪ್ರತಿನಿಧಿ ಕವಿತಾ ಮಾತನಾಡಿ ವಾಲ್ಮೀಕಿ ಜಯಂತೋತ್ಸವ ಕೇವಲ ಮಹರ್ಷಿ ವಾಲ್ಮೀಕಿರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮುಗಿಸುವ ಆಚರಣೆಯಾಗದೆ ಜಯಂತಿಯ ನಿಜವಾದ ಅರ್ಥವನ್ನು ಅರಿಯಬೇಕು, ವಾಲ್ಮೀಕಿಯವರ ಬದುಕಿನಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಕಲಿಯಬೇಕಾದ್ದು ಬಹಳಷ್ಟಿದೆ, ತಪ್ಪು ಮಾಡಿದ ಮನುಷ್ಯನಿಗೂ ಬದಲಾಗುವ ಅವಕಾಶವಿದೆ ಎಂಬುದನ್ನು ಅವರ ಜೀವನ ತಿಳಿಸುತ್ತದೆ, ರಾಮಾಯಣಕ್ಕೆ ಮನುಷ್ಯನನ್ನ ಪರಿವರ್ತಿಸುವ ಶಕ್ತಿ ಇದ್ದು ಇಂತ ರಾಮಾಯಣವನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಪಟ್ಟಣದ ಬಸ್ ನಿಲ್ದಾಣದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸಿ ಅನಂತರಾಮು, ಪಿಎಸ್ಐ ತೀಥೇಶ್, ಪುರಸಭಾ ಮುಖ್ಯಾಧಿಕಾರಿ ಉಮೇಶ್, ಯಮುನಾ, ಅನಂತರಾಮು, ಜೋಸ್ನಾರೆಡ್ಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ರಂಗರಾಜು, ಸಮಾಜದ ಮುಖಂಡರುಗಳಾದ ಕುಮಾರ್, ವಿನಯ್ಕುಮಾರ್, ಮಹೇಶ್, ಹನುಮಂತರಾಜು, ನಾಗರಾಜು, ಆಟೋವಿಜಯ್, ಗಂಗಾಧರಪ್ಪ, ಲಕ್ಮೀಶ, ಲಕ್ಷ್ಮಿಪುತ್ರ ಸೇರಿದಂತೆ ತಾಲೂಕಿನ ಎಲ್ಲಾ ಮುಖಂಡರುಗಳು ಹಾಜರಿದ್ದರು.
- ಶ್ರೀನಿವಾಸ್ ಕೊರಟಗೆರೆ.
