ಆಲೂರು : ಸರಕಾರಿ ನೌಕರರಿಗೆ ಆಯಾ ಇಲಾಖೆಗೆ ಸಂಬಂಧಿಸಿದಂತೆ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಕಾರ್ಯದಕ್ಷತೆ ಬಹಳ ಮುಖ್ಯ. ನಮ್ಮ ನಮ್ಮ ಕಾಯಕದಲ್ಲಿ ನಾವು ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಆತ್ಮತೃಪ್ತಿ ಕಾಣಲು ಸಾಧ್ಯ ಎಂದು ಆಲೂರು ತಾಲ್ಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಆಲೂರು ತಾಲ್ಲೂಕು ಘಟಕ ಪಟ್ಟಣದ ನೌಕರರ ಭವನದಲ್ಲಿ ಏರ್ಪಡಿಸಿದ್ದ ೨೦೨೬ ಸೆಪ್ಟಂಬರ್ ಮಾಹೆಯಲ್ಲಿ ಸೇವಾನಿವೃತ್ತಿ ಹೊಂದಿದ ಶಿಕ್ಷಣ ಇಲಾಖೆಯ ನೌಕರರದಾ ನಿಡನೂರು ಶಾಲೆಯ ಶಿಕ್ಷಕಿ ರತ್ನಮ್ಮ ಹಾಗೂ ಕೊಡಿಗಿಹಳ್ಳಿ ಶಾಲೆಯ ಶಿಕ್ಷಕ ತಿಮ್ಮಪ್ಪರವರಿಗೆ ಹಮ್ಮಿಕೊಂಡಿದ್ದ “ಜೀವಮಾನ ಸಾಧನಾ ಶಿಕ್ಷಣ ರತ್ನ ಪ್ರಶಸ್ತಿ” ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ರತ್ನಮ್ಮ ಹಾಗೂ ತಿಮ್ಮಪ್ಪರವರ ಕೊಡುಗೆ ಅಪಾರವಾಗಿದೆ. ಎಲ್ಲಾ ವೃತ್ತಿಗಳಿಗಿಂತಲೂ ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ನಮ್ಮಿಂದ ಕಲಿತ ಸಾವಿರಾರು ಮಕ್ಕಳು ಸಮಾಜದ ವಿವಿಧ ಸ್ತರಗಳಲ್ಲಿ ಕಾಯಕನಿರತರಾಗಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಲು ರಹದಾರಿಯಾಗುತ್ತದೆ ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಖಜಾಂಚಿ ಶಾಂತಕೃಷ್ಣ ಮಾತನಾಡಿ ವರದರಾಜುರವರು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ನಂತರ ಭವನದ ಅಭಿವೃದ್ಧಿ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಜೊತೆಗೆ ಸುದೀರ್ಘ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹಿಂದಿದ ಸಾಧಕರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸುವುದು ಆದರ್ಶಪ್ರಾಯವಾದ ಕಾರ್ಯವಾಗಿದೆ ಎಂದರು.
ವೇದಿಕೆಯಲ್ಲಿ ಆಲೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್. ಶ್ರೀನಿವಾಸ್ ಮತ್ತು ನಿಡನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರತ್ನಮ್ಮ ಹಾಗೂ ಕೊಡಿಗಿಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ ತಿಮ್ಮಪ್ಪನವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಸರಕಾರಿ ನೌಕರರ ಸಂಘದ ಕಾರ್ಯದ ಬಗ್ಗೆ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಆಲೂರು ತಾಲ್ಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಆರ್. ಧರ್ಮ, ಶಾಲಾ ಶಿಕ್ಷಣ ಸಂಘದ ತಾಲ್ಲೂಕು ಅಧ್ಯಕ್ಷ ಭೂಪಾಲಯ್ಯ, ಜಿಲ್ಲಾ ಶಿಕ್ಷಕರ ಸಂಘದ ಲೆಕ್ಕಪರಿಶೋಧಕ ಸಿ.ಎಸ್.ಅಣ್ಣಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಆರ್. ವೇಣುಗೋಪಾಲ, ರವಿತ ವಿ, ಸಹ ಕಾರ್ಯದರ್ಶಿ ಜಯಣ್ಣ ಹಂತನಮನೆ, ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರಾದ ರವಿ, ಚಂದ್ರಕುಮಾರ್, ಎಸ್.ಎಂ. ನಾಗರಾಜ್, ಸಹನಾ, ಹರೀಶ್, ಪವನ್ ಕುಮಾರ್, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಬಿ.ಆರ್. ಧರ್ಮ, ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಆರ್. ವೇಣುಗೋಪಾಲ, ಜಿಲ್ಲಾ ಲೆಕ್ಕ ಪರಿಶೋಧಕ ಸಿ.ಎಸ್. ಅಣ್ಣಪ್ಪ ಕಾರ್ಯಕ್ರಮ ನಿರ್ವಹಿಸಿದರು.
.
