ಶ್ಲೋಕ – 09
ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋSಲ್ಪಬುದ್ಧಯಃ ।
ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋSಹಿತಾಃ ॥೯॥
ಏತಾಮ್ ದೃಷ್ಟಿಮ್ ಅವಷ್ಟಭ್ಯ ನಷ್ಟ ಆತ್ಮಾನಃ ಅಲ್ಪಬುದ್ಧಯಃ ।
ಪ್ರಭವಂತಿ ಉಗ್ರಕರ್ಮಾಣಃ ಕ್ಷಯಾಯ ಜಗತಃ ಅಹಿತಾಃ –ಇಂಥ ನಿಲುವನ್ನು ನೆಚ್ಚಿಕೊಂಡು ವಿವೇಕ ಕಳೆದುಕೊಂಡ ಅರಿವುಗೇಡಿಗಳು-ಜನಾಂಗದ ಕೇಡಿಗಳು. ಒರಟು ನಡೆಯ ಇಂಥವರು ಜಗದ ನಾಶಕ್ಕೆ ಕಾರಣರಾಗುತ್ತಾರೆ.
ಆಸುರ ಮನೋವೃತ್ತಿ ಬೆಳೆಸಿಕೊಳ್ಳುವ ಜನ ತಮ್ಮ ಬದುಕಿಗೆ ಅನರ್ಥವನ್ನು ತಂದುಕೊಂಡು ತಮ್ಮ ನಾಶಕ್ಕೆ ತಾವೇ ಕಾರಣರಾಗುತ್ತಾರೆ. ಇವರು ತಮ್ಮ ನಂಬಿಕೆಯೇ ತಮ್ಮನ್ನು ನಾಶ ಮಾಡುತ್ತಿದೆ, ತಾವು ಕತ್ತಲೆಯ ದಾರಿಯಲ್ಲಿ ನಡೆಯುತ್ತಿದ್ದೇವೆ ಎನ್ನುವ ಎಚ್ಚರವೂ ಇಲ್ಲದೆ ಉಗ್ರಗಾಮಿ(ಉಗ್ರಕರ್ಮಾಣಃ)ಗಳಾಗುತ್ತಾರೆ. ಇದರ ಪರಿಣಾಮ ಇವರು ಲೋಕಶತ್ರುಗಳಾಗಿ, ಲೋಕ ನಾಶಕ್ಕೆ ಕಾರಣರಾಗುತ್ತಾರೆ. ಈ ರೀತಿಯ ಮನೋವೃತ್ತಿ ಇದ್ದು ನಮ್ಮ ನಿಮ್ಮ ನಡುವೆ ಇರುವ ಜನರೇ ಅಸುರರು.
