ಅರಕಲಗೂಡು: ಓದು ವಿದ್ಯಾರ್ಥಿಗೆ ವಿನಯ ಭಾವವನ್ನು ಕಲಿಸುವುದರ ಜೊತೆಗೆ ಜ್ಞಾನಪಿಪಾಸೆಯನ್ನು ಹೆಚ್ಚಿಸಿ, ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಸಾಹಿತಿ ಸುಶೀಲ ಸೋಮಶೇಖರ್ ಹೇಳಿದರು.
ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ನನ್ನ ಮೆಚ್ಚಿನ ಪುಸ್ತಕ ಓದು’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರಲ್ಲಿ ಜ್ಞಾನಪಿಪಾಸೆ ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ ಹೆಚ್ಚಾದಂತೆ ಮಾನಸಿಕ ಶಕ್ತಿಯೂ ಹೆಚ್ಚುತ್ತದೆ. ಓದುವಾಗ ಏಕಾಗ್ರತೆ ಅತ್ಯಂತ ಮುಖ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕ ಓದು ಪೂರಕವಾಗಿದ್ದು, ಬೌದ್ಧಿಕ ಸಾಮರ್ಥ್ಯದ ಬೆಳವಣಿಗೆಗಾಗಿ ಪಠ್ಯಪುಸ್ತಕಗಳ ಜತೆಗೆ ವಿವಿಧ ವಿಶಿಷ್ಟ ಕೃತಿಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
‘ಇಂದು ತಲೆತಗ್ಗಿಸಿ ಏಕಚಿತ್ತದಿಂದ ಓದಿದರೆ, ಮುಂದೆ ನಿಮ್ಮ ಭವಿಷ್ಯದಲ್ಲಿ ತಲೆ ಎತ್ತಿ ಸಮಾಜದಲ್ಲಿ ಬದುಕಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸುಸಂಸ್ಕೃತರು ಹಾಗೂ ಪ್ರಜ್ಞಾವಂತರಾದಷ್ಟು ದೇಶದ ಹಿತವೂ ಸುಭಿಕ್ಷವಾಗುತ್ತದೆ’ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ. ಕುಶಾಲ ಬರಗೂರು ಮಾತನಾಡಿ, ವಿದ್ಯಾರ್ಥಿಗಳ ಮನಸ್ಸು ಫಲವತ್ತಾದ ಸುಂದರ ಭೂಮಿಕೆಯಿದ್ದಂತೆ. ಅದರಲ್ಲಿ ಉತ್ತಮ ಚಿಂತನೆ, ಜೀವನ ತತ್ವ ಹಾಗೂ ಅನುಭವಗಳನ್ನು ಬಿತ್ತುವ ಶಕ್ತಿಯುತ ಪುಸ್ತಕಗಳನ್ನು ಓದಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದರು.
ಪುಸ್ತಕಗಳು ಮನೆಯ ಭಂಡಾರದ ಒಡವೆಗಳಾಗಲಿ, ಜ್ಞಾನದ ಮುತ್ತುಗಳು ವಿದ್ಯಾರ್ಥಿಗಳ ಮನದ ರತ್ನಗಳಾಗಲಿ. ಪುಸ್ತಕ ಜ್ಞಾನ ಮತ್ತು ವಿದ್ಯಾರ್ಥಿಗಳ ಜೀವನ ಗುರಿಯ ನಡುವೆ ನಂಟು ಬೆಳೆಸುವುದರ ಜೊತೆಗೆ ಗ್ರಂಥಾಲಯದೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುವುದು ಕನ್ನಡ ಪುಸ್ತಕ ಪ್ರಾಧಿಕಾರದ ಆಶಯವಾಗಿದೆ ಎಂದು ತಿಳಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಓದು ಹಾಗೂ ಓದಿನಿಂದ ಪಡೆದ ಲೋಕಜ್ಞಾನ ನಮ್ಮನ್ನು ಎಂದಿಗೂ ಕಾಪಾಡುತ್ತದೆ. ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಸ್ಮರಿಸಿದ ಅವರು, ಅಂದು ಕಥೆ, ಕಾದಂಬರಿಗಳನ್ನು ಓದಲು ಖಾಸಗಿ ಗ್ರಂಥಾಲಯಗಳಲ್ಲಿ ದಿನದ ಶುಲ್ಕ ಪಾವತಿಸಬೇಕಾಗಿತ್ತು. ಹಣ ಉಳಿತಾಯ ಮಾಡುವ ಉದ್ದೇಶದಿಂದ ಒಂದೇ ದಿನದಲ್ಲಿ ಪುಸ್ತಕ ಓದಿ ಮುಗಿಸುವ ಪ್ರಯತ್ನ ಮಾಡುತ್ತಿದ್ದೆ. ಆ ಓದಿನ ಅಭ್ಯಾಸವೇ ಮುಂದೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಕಾರಣವಾಯಿತು. ಇದುವರೆಗೆ ಸುಮಾರು 70 ಕೃತಿಗಳು ಪ್ರಕಟವಾಗಿವೆ ಎಂದು ತಮ್ಮ ಓದಿನ ದಿನಗಳನ್ನು ಮೆಲುಕು ಹಾಕಿದರು.
ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಎಲ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಸುಂದರೇಶ್ ಉಡುವಾರೆ, ಕಾಲೇಜು ಸಿಡಿಸಿ ಕಾರ್ಯಾಧ್ಯಕ್ಷ ಬಾಲಾಜಿ ಎ.ಆರ್., ಆಡಿಟರ್ ಚಿದಂಬರ್, ಸಹಾಯಕ ಪ್ರಾಧ್ಯಾಪಕ ಪ್ರಸನ್ನ ಸೇರಿದಂತೆ ಕಾಲೇಜಿನ ಉಪನ್ಯಾಸಕರು ವೇದಿಕೆಯಲ್ಲಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ರಾಗಿಣಿ, ಶ್ರೀಪ್ರದ ದಯಾಳ್, ಅಹಲ್ಯ, ಭೂಮಿಕ, ನವ್ಯ ಎಂ.ಸಿ., ಸಿಂಚನ, ಸುಚಿತ್ರ ಲಕ್ಷ್ಮಿ ವಿ.ಕೆ. ಹಾಗೂ ವೆಂಕಟೇಶ್ ಅವರು ತಮ್ಮ ಮೆಚ್ಚಿನ ಪುಸ್ತಕಗಳ ಓದು ಮತ್ತು ಅವಲೋಕನವನ್ನು ವಿಮರ್ಶಾತ್ಮಕವಾಗಿ ಪ್ರಸ್ತುತಪಡಿಸಿದರು.
