ಹಾಸನ: ಚಿತ್ರಕಲಾ ಕ್ಷೇತ್ರದಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿರುವ ಹಿರಿಯ ಕಲಾವಿದ ಹಾಗೂ ಶಿಕ್ಷಕರಾದ ಬಿ. ಎಸ್. ದೇಸಾಯಿ ಅವರಿಗೆ 2025–26ನೇ ಸಾಲಿನ ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ಕದಂಬ ಸೇನೆ ಕನ್ನಡ ಸಂಘಟನೆಯ ಹಾಸನ ಜಿಲ್ಲಾ ಘಟಕದಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.
ದೇಸಾಯಿಯವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಸಾಧಕರನ್ನು ಗುರುತಿಸಿ ಗೌರವಿಸುವ ಸಂಘಟನೆಯ ಕಾರ್ಯ ಶ್ಲಾಘನೀಯ. ದೇಸಾಯಿಯವರು ಚಿತ್ರಕಲೆಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿರುವುದು ಜಿಲ್ಲೆಯ ಹೆಮ್ಮೆಯ ವಿಷಯ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಎಸ್. ದೇಸಾಯಿ, ಕಳೆದ 36 ವರ್ಷಗಳಿಂದ ಚಿತ್ರಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಇದು ತಮಗೆ ಅಪಾರ ತೃಪ್ತಿ ನೀಡಿದೆ ಎಂದರು. ಪ್ರಕೃತಿ, ಸಮಾಜ ಮತ್ತು ಯೋಗದ ಅಂತರಂಗವನ್ನು ಚಿತ್ರಗಳ ಮೂಲಕ ಅಭಿವ್ಯಕ್ತಗೊಳಿಸುವ ಪ್ರಯತ್ನ ತಮ್ಮದು ಎಂದು ಹೇಳಿದ ಅವರು, ಹಾಸನದಲ್ಲಿ ಒಂದು ಸಮಗ್ರ ಕಲಾ ಗ್ಯಾಲರಿ ಸ್ಥಾಪನೆಯಾಗಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದರು.
ವಿಶ್ವದ ಶ್ರೇಷ್ಠ ಚಿತ್ರಕೃತಿಗಳ ಜೊತೆಗೆ ಸ್ಥಳೀಯ ಕಲಾವಿದರ ಕೃತಿಗಳಿಗೆ ಕೂಡ ಅವಕಾಶ ಸಿಗುವಂತಾಗಬೇಕು ಎಂದು ಆಶಿಸಿದರು.
ಕದಂಬ ಸೇನೆ ಕನ್ನಡ ಸಂಘಟನೆಯ ಜಿಲ್ಲಾ ಅಧ್ಯಕ್ಷ ಹೆಚ್. ಎ. ಗಣೇಶ್ ಅಂಕಪುರ ಮಾತನಾಡಿ, ಕಲೆ ಎಲ್ಲರನ್ನು ಆಕರ್ಷಿಸಿದರೂ ಕೆಲವರನ್ನು ಮಾತ್ರ ಆಯ್ಕೆ ಮಾಡುತ್ತದೆ.

ದೇಸಾಯಿಯವರ ಮನೆ ಸ್ವತಃ ಒಂದು ಕಲಾ ಗ್ಯಾಲರಿಯಂತಿದ್ದು, ಅವರ ಚಿತ್ರಗಳು ಅಮೂರ್ತ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಎನ್. ಚಿದಾನಂದ, ಸಾಹಿತಿ ಹಾಗೂ ಉದ್ಯಮಿಗಳಾದ ವಿಶ್ವಾಸ್ ಡಿ. ಗೌಡ, ಕುಮಾರ್, ಜೆ.ಆರ್. ಶ್ರೀಕಾಂತ್ ಸೇರಿದಂತೆ ಹಲವರು ದೇಸಾಯಿಯವರನ್ನು ಅಭಿನಂದಿಸಿದರು.
