ಇವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೇಗಲಪುರದವರು. ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್ಸಿ ಒಂದು ಪ್ರಮುಖ ಘಟ್ಟ. ಇಲ್ಲಿ ಫೇಲಾದವರು ಮುಂದೆ ಓದುವ ಆಸಕ್ತಿ ಕಳೆದುಕೊಳ್ಳುತ್ತಾರೆ. ಓದು ಬಿಟ್ಟು ಕೆಲಸ ಹುಡುಕುತ್ತಾರೆ. ಅಂತೆಯೇ ನಾಗರಾಜ್ ಅವರು ಎಚ್.ಐ.ಎಸ್. ಎಂಬ ಸಿನಿಮಾ ಟೆಂಟ್ನಲ್ಲಿ ಟಿಕೆಟ್ ಹರಿದುಕೊಡುವ ಕೆಲಸಕ್ಕೆ ಸೇರಿಕೊಂಡರು.
ನಂತರ ಹಲಗೂರು–ದೊಡ್ಡಿ–ಮಂಡ್ಯ ಸುತ್ತುವ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್ ಕಮ್ ಕ್ಲೀನರ್ ಆಗಿ ಕೆಲಸ ಮಾಡಿದರು. ಸಿನಿಮಾದಲ್ಲಿ ನಟನಾಗಬೇಕೆಂಬ ಆಸೆ ಸಿನಿಮಾ ಟೆಂಟ್ನಲ್ಲಿ ಟಿಕೆಟ್ ಕೊಡುವಾಗಲೇ ಅವರ ತಲೆಯಲ್ಲಿ ಬೇರೂರಿತ್ತು. ಬಸ್ನಲ್ಲಿ ಟಿಕೆಟ್ ಕೊಟ್ಟು, ಡ್ರೈವರ್ಗೆ ‘ರೈಟ್’ ಹೇಳಿ, ರಾತ್ರಿಯೆಲ್ಲಾ ನಟನೆಯ ಕನಸು ಕಾಣುತ್ತಿದ್ದರು.

ಸಿನಿಮಾದ ಗುಂಗಿನಲ್ಲೇ ಬೆಂಗಳೂರಿಗೆ ಬಂದರು. ಆಟೋ ಸ್ಟ್ಯಾಂಡ್ನಲ್ಲಿ ಆಟೋ ತೊಳೆಯುತ್ತಾ, ಮುಂದೆ ಆಟೋ ಚಾಲಕರಾದರು. ತುಮಕೂರು ಮಹಾದೇವಯ್ಯ ಅವರು ಆಟೋ ಖರೀದಿಸಲು ನೆರವಾದರು. ‘ರಿಕ್ಷಾ ಓಡಿಸಿದ್ರೂ ಚಿನ್ನಾ, ರಿಚ್ ಆಗಿ ಸಾಕ್ತೀನಿ ನಿನ್ನಾ…’ ಎಂದು ಆಟೋದ ಹಿಂದೆ ಬರೆಸಿಕೊಂಡು, ಐದು ವರ್ಷಗಳ ಕಾಲ ಯಾವುದೇ ಸಿನಿಮಾದಲ್ಲಿ ಅವಕಾಶ ಸಿಗದೆ ಆಟೋ ಓಡಿಸಿಕೊಂಡು ಜೀವನ ನಡೆಸಿದರು.
ಹೀಗಿರುವಾಗ ಒಮ್ಮೆ ಕಂಠೀರವ ಸ್ಟುಡಿಯೋಗೆ ಬಾಡಿಗೆಗೆ ಹೋಗಿ, ಅಲ್ಲಿ ನಡೆಯುತ್ತಿದ್ದ ಚಿತ್ರೀಕರಣವನ್ನು ನೋಡುತ್ತಾ ನಿಂತಿದ್ದರು. ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಜನರನ್ನು ಹಿಂದೆ ಕಳಿಸಲು ತಮ್ಮ ಸಹಾಯಕರಿಗೆ ತಿಳಿಸಿದರು. ಈ ತಳ್ಳಾಟದಲ್ಲಿ ನಾಗರಾಜ್ ಕೆಳಗೆ ಬಿದ್ದರು. ಅಂದು ಕೆಳಗೆ ಬಿದ್ದ ನಾಗರಾಜ್ ಮತ್ತೆ ಮೇಲೆದ್ದು, ಓಂ ಸಾಯಿ ಪ್ರಕಾಶ್ ಅವರ ಮಾರ್ಗದರ್ಶನದಂತೆ ಆಟೋಗಳಿಗೆ ಸಿನಿಮಾ ಪೋಸ್ಟರ್ಗಳನ್ನು ಅಂಟಿಸಿ ಪ್ರಚಾರ ಮಾಡುವ ಮೂಲಕ ಸಿನಿಮಾ ರಂಗದ ಸಂಪರ್ಕ ಸಾಧಿಸಿದರು. ಆ ಮೂಲಕ ಪೋಷಕ ನಟನಾಗಿ ಅವಕಾಶ ಗಿಟ್ಟಿಸಿಕೊಂಡರು.
ಇವರ 20 ವರ್ಷಗಳ ಚಿತ್ರರಂಗದ ಪಯಣದಲ್ಲಿ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ದರ್ಶನ್ ಅಭಿನಯದ ಸಾರಥಿ ಸಿನಿಮಾದಲ್ಲಿ ತೂಗುದೀಪ ದಿನಕರ್ ಅವರು ನಟನೆಗೆ ಅವಕಾಶ ನೀಡಿದರು. ಈ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ 400 ಆಟೋಗಳು ಬೇಕಾಗಿದ್ದವು. ಇಷ್ಟೂ ಆಟೋಗಳನ್ನು ಒದಗಿಸಿ, ಸಂಘಟಿಸಿದವರು ಇದೇ ಆಟೋ ನಾಗರಾಜ್.

ಈ ಪಾದ ಪುಣ್ಯಪಾದ ಹಾಗೂ ಸರ್ವಾಂತರ್ಯಾಮಿ ಚಿತ್ರಗಳಲ್ಲಿ ಇವರದು ಪ್ರಮುಖ ಪಾತ್ರ.
ಕಳೆದ ವರ್ಷ ಮೈಸೂರು ದಸರಾ ಫಿಲಂ ಫೆಸ್ಟಿವಲ್ನಲ್ಲಿ ಈ ಪಾದ ಪುಣ್ಯಪಾದ ಸಿನಿಮಾ ಮೈಸೂರಿನ ಮಾಲ್ ಆಫ್ ಮೈಸೂರು ಶಾಪಿಂಗ್ ಕಾಂಪ್ಲೆಕ್ಸ್ನ ಐನಾಕ್ಸ್ನಲ್ಲಿ ಪ್ರದರ್ಶನಗೊಂಡಿತ್ತು. ಇದೊಂದು ಆನೆಕಾಲು ರೋಗಿಯ ಕಥೆ. ಈ ಸಿನಿಮಾ ಪ್ರೇಕ್ಷಕರ ಮೇಲೆ ಹೊಸ ಆಯಾಮದಲ್ಲಿ ಪರಿಣಾಮ ಬೀರುತ್ತದೆ. ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಬರುತ್ತವೆ. ರೋಗ ಬಂದಾಗ ರೋಗಕ್ಕಿಂತ ಮಾನಸಿಕ ಯಾತನೆಯೇ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಎದೆಗುಂದದೆ, ತಾಳ್ಮೆಯಿಂದ ಎದುರಿಸಬೇಕೆಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ. ಚಿತ್ರದ ನಿರ್ದೇಶಕರು ಸಿದ್ದು ಪೂರ್ಣಚಂದ್ರ.
ಇವರ ನಿರ್ದೇಶನದ ದಾರಿ ಯಾವುದಯ್ಯ ವೈಕುಂಠಕ್ಕೆ ಸಿನಿಮಾಕ್ಕೆ ನೂರಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಸಿದ್ದು ಅವರು ಈ ಮೊದಲೇ ನನಗೆ ಪರಿಚಿತರಾಗಿದ್ದರು. ಅವರ ಕರೆಯ ಮೇರೆಗೆ ಅಂದು ಮೈಸೂರಿಗೆ ಹೋಗಿದ್ದ ನಾನು ಸಿನಿಮಾ ನೋಡಿ ವಿಮರ್ಶೆ ಬರೆದಿದ್ದೆ. ಮರುದಿನ ಬೆಳಿಗ್ಗೆಯೇ ಆಟೋ ನಾಗರಾಜ್ ಫೋನ್ ಮಾಡಿ ಧನ್ಯವಾದ ತಿಳಿಸಿ, ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು.
ಇವರ ಪ್ರಮುಖ ಪಾತ್ರವಿರುವ ಸರ್ವಾಂತರ್ಯಾಮಿ ಚಿತ್ರ ಬಿಡುಗಡೆಯಾಗಿದೆ. ‘ಸರ್ವಾಂತರ್ಯಾಮಿ’ ಪದದ ಅರ್ಥ ಎಲ್ಲರ ಮನಸ್ಸಿನಲ್ಲಿ ಇರುವವನು ಹಾಗೂ ಎಲ್ಲರ ಮನದ ಮಾತನ್ನು ತಿಳಿದುಕೊಂಡಿರುವವನು ಎಂದರ್ಥ. ಮೊಬೈಲ್ ಫೋನ್ನ ದುರುಪಯೋಗದಿಂದ ಉಂಟಾಗುವ ದುರಂತದ ಕಥೆಯನ್ನು ಹೇಳುವ ಈ ಸಿನಿಮಾದ ನಿರ್ದೇಶಕರು ರಂಗಸ್ವಾಮಿ ಕಪನಿಪಾಳ್ಯ.
ಇವರು ಈ ಮೊದಲು ಕೃಷ್ಣ ಲೀಲಾ, ಅಮ್ಮ ಐ ಲವ್ ಯು, ಶಿವಾಜಿನಗರ, ತಾಯಿಗೆ ತಕ್ಕ ಮಗ, ಇರುವುದೆಲ್ಲವ ಬಿಟ್ಟು, ಕಾಟೇರ, ದೃಶ್ಯ, ರಾಬರ್ಟ್, ರಸ್ತುಂ ಮೊದಲಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ರಾಯದುರ್ಗಿ, ಗುಡ್ಡದ ಭೂತ, ವಿಚಾರಣೆ, ಬಸ್ ಕಂಡಕ್ಟರ್, ಮೈಸೂರು ಡಾನ್ ಮೊದಲಾದ ಚಿತ್ರಗಳು ಇವರ ಮುಂಬರುವ ಚಿತ್ರಗಳಾಗಿವೆ.
ಚಿತ್ರರಂಗಕ್ಕೆ ಬಂದು ನಟನಾಗಿ ಗುರುತಿಸಿಕೊಂಡಿದ್ದರೂ ನಾಗರಾಜ್ ಅವರು ‘ಆಟೋ’ ಎಂಬ ಪದವನ್ನು ತಮ್ಮ ಹೆಸರಿನಿಂದ ಬಿಟ್ಟಿಲ್ಲ. ಇದು ಅವರ ಬದುಕಿನ ಪಾಠ.
ಗೊರೂರು ಅನಂತರಾಜು,
ಹಾಸನ ಮೊ.: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ–೫೭೩೨೦೧.
