ಹಾಸನ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎ.ವಿ.ಕೆ ಪಿಯು ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಎವಿಕೆ ಟ್ಯಾಲೆಂಟ್ ಸ್ಕಾಲರ್ಶಿಪ್ ಟೆಸ್ಟ್’ ಅತ್ಯಂತ ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೊದಲ ಮೂರು ವಿದ್ಯಾರ್ಥಿಗಳಿಗೆ ಕ್ರಮವಾಗಿ ₹10,000, ₹7,000 ಮತ್ತು ₹5,000 ನಗದು ಬಹುಮಾನ ಘೋಷಿಸಲಾಗಿದ್ದು, ಮುಂದಿನ 5 ವಿದ್ಯಾರ್ಥಿಗಳಿಗೆ ತಲಾ ₹1,000 ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು. ಕೇವಲ ನಗದು ಬಹುಮಾನ ಮಾತ್ರವಲ್ಲದೆ, ಮೊದಲ 20 ಶ್ರೇಯಾಂಕಿತ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಪ್ರವೇಶಾತಿಯಲ್ಲಿ ವಿಶೇಷ ರಿಯಾಯಿತಿ ಹಾಗೂ ಸ್ಕಾಲರ್ಶಿಪ್ ಸೌಲಭ್ಯವನ್ನು ಕಾಲೇಜು ಮಂಡಳಿ ನೀಡಿದೆ.
ಇದೇ ಸುಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿತು. ದೇಶದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ‘ಆಕಾಶ್’ (Aakash) ನೊಂದಿಗೆ ಸಹಯೋಗ ಹೊಂದಿದ್ದು, ಇನ್ನು ಮುಂದೆ ಕಾಲೇಜಿನಲ್ಲಿಯೇ ಜೆಇಇ (JEE) ಮತ್ತು ಐಐಟಿ (IIT) ಪರೀಕ್ಷೆಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುವುದು ಎಂದು ತಿಳಿಸಲಾಯಿತು.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ವಿಶಿಷ್ಟ ಶೈಕ್ಷಣಿಕ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರವೇಶಾತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ತಕ್ಷಣ ಕಾಲೇಜನ್ನು ಸಂಪರ್ಕಿಸಿ ಈ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ಇನ್ನು ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ನಾಗರಾಜ್ ಜೈನ್, ಆಕಾಶ್ ಸಂಸ್ಥೆಯ ರಿಜಿನಲ್ ಹೆಡ್ ಅನಿಲ್ , ಬ್ರಾಂಚ್ ಮ್ಯಾನೇಜರ್ ನಾಗಭೂಷಣ್,ಕಾಲೇಜಿನ ಪ್ರಾಂಶುಪಾಲರಾದ ಕಾರ್ಮೆಲ್ ಶ್ರೀನಾ, ಮೈಲ್ ಸ್ಟೋನ್ ಸಂಸ್ಥೆಯ ಮುಖ್ಯಸ್ಥರಾದ ಪ್ರಜ್ವಲ್ ಸೇರಿದ್ದಂತೆ ಇತರರು ಹಾಜರಿದ್ದರು.
– ಶಿವಕುಮಾರ್ ಕಟ್ಟಾಯ.
