ಬೇಲೂರು ತಾಲ್ಲೂಕಿನಲ್ಲಿ B. R. Ambedkar ಜಯಂತಿ ಕಾರ್ಯಕ್ರಮದಲ್ಲಿ ಅವಮಾನ ನಡೆದಿದೆ ಎಂಬ ಆರೋಪದ ಹಿನ್ನೆಲೆ ದಲಿತ ಸಂಘಟನೆಗಳು ಶಾಸಕ H. K. Suresh ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ಪುತ್ಥಳಿ ಬಳಿ ಉಗ್ರ ಪ್ರತಿಭಟನೆ ನಡೆಸಿದವು.
ತಾಲ್ಲೂಕು ಆಡಳಿತದಿಂದ ಕಾರ್ಯಕ್ರಮವನ್ನು ಸಮರ್ಪಕವಾಗಿ ಆಯೋಜಿಸದೆ, ಅಂಬೇಡ್ಕರ್ ಪುತ್ಥಳಿಗೆ ಅಚ್ಚುಕಟ್ಟಾದ ಅಲಂಕಾರ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ದಲಿತ ಸಂಘಟನೆಗಳು ಶಾಸಕರಿಗೆ ಮಾಲಾರ್ಪಣೆ ಮಾಡಲು ಅಡ್ಡಿಪಡಿಸಿ, ಮೊದಲು ನ್ಯಾಯ ನೀಡಬೇಕು ಎಂದು ಪಟ್ಟು ಹಿಡಿದವು. ಬಳಿಕ ಶಾಸಕ ಸುರೇಶ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು, “ಅಂಬೇಡ್ಕರ್ ಮಹಾನ್ ನಾಯಕನಿಗೆ ಅವಮಾನ ಸಲ್ಲದು” ಎಂದು ಕಿಡಿಕಾರಿದರು. ಈ ವೇಳೆ ಯೋಜಿತವಾಗಿದ್ದ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಿ, ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಹೊರ ನಡೆದರು.

ಸಭೆಯಲ್ಲಿ ಮಾತನಾಡಿದ ಶಾಸಕ ಸುರೇಶ್, “ವಿಶ್ವದಾದ್ಯಂತ ಅಂಬೇಡ್ಕರ್ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಆದರೆ ಬೇಲೂರು ತಾಲ್ಲೂಕು ಆಡಳಿತ ಕನಿಷ್ಠ ಅಲಂಕಾರ ಮತ್ತು ವ್ಯವಸ್ಥೆಯನ್ನೂ ಮಾಡದೇ ವೈಫಲ್ಯ ಕಂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ತಾಲ್ಲೂಕು ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿ, ಈ ಕುರಿತು ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ದಲಿತ ಮುಖಂಡರಾದ ಪರ್ವತಯ್ಯ, ರಮೇಶ್, ಚಂದ್ರಶೇಖರ್, ಎಂ.ಜಿ. ವೆಂಕಟೇಶ್ ಅವರು ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳೇ ಅವರಿಗೇ ಅವಮಾನ ಎಸಗಿರುವುದು ಶೋಚನೀಯ ಎಂದು ಹೇಳಿದರು. ಪೂರ್ವಭಾವಿ ಸಭೆ ನಡೆಸಿದ್ದರೂ ಸರಿಯಾದ ಕಾರ್ಯಕ್ರಮ ಆಯೋಜಿಸದಿರುವುದನ್ನು ಖಂಡಿಸಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಅಧ್ಯಕ್ಷ ಸಂಜು ಕೌರಿ, ಮಾಜಿ ಅಧ್ಯಕ್ಷ ರೇಣುಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಎಸ್. ಪ್ರಕಾಶ್, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ ಸೇರಿದಂತೆ ಹಲವು ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
