ನವದೆಹಲಿ: ಪಶ್ಚಿಮ ಬಂಗಾಳದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ಸ್ಪಷ್ಟನೆ ನೀಡಿದೆ. ಮತದಾರರ ಪಟ್ಟಿಯಿಂದ ಹೊರಬಿದ್ದವರು ಮೇಲ್ಮನವಿ ಸಲ್ಲಿಸಿ, ಟ್ರಿಬ್ಯೂನಲ್ನಲ್ಲಿ ಅವರ ಅರ್ಜಿ ಪುರಸ್ಕೃತಗೊಂಡರೆ ಅಂತಹವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹತೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಯಶಸ್ವಿ ಮೇಲ್ಮನವಿದಾರರಿಗೆ ಮಾತ್ರ ಅವಕಾಶ
ಒಮ್ಮೆ ಮೇಲ್ಮನವಿ ನ್ಯಾಯಾಧೀಕರಣವು (Appellate Tribunal) ಅರ್ಜಿದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಆದೇಶಿಸಿದರೆ, ಚುನಾವಣಾ ನೋಂದಣಿ ಅಧಿಕಾರಿಗಳು ವಿಳಂಬ ಮಾಡದೆ ಪೂರಕ ಪಟ್ಟಿಯ ಮೂಲಕ ಹೆಸರನ್ನು ಸೇರಿಸಬೇಕು ಎಂದು ಪೀಠ ನಿರ್ದೇಶಿಸಿದೆ. ಇದರಿಂದ ಸಾವಿರಾರು ಜನರಿಗೆ ಮತದಾನದ ಹಕ್ಕು ಮರಳಿ ಸಿಕ್ಕಂತಾಗಿದೆ.
ಬಾಕಿ ಇರುವ ಅರ್ಜಿಗಳಿಗೆ ಮತದಾನದ ಹಕ್ಕಿಲ್ಲ
ಆದರೆ, ಅರ್ಜಿಗಳು ಇನ್ನೂ ವಿಚಾರಣಾ ಹಂತದಲ್ಲಿದ್ದರೆ (Pending) ಅಂತಹವರಿಗೆ ಮತದಾನ ಮಾಡಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಅರ್ಜಿಗಳು ಇತ್ಯರ್ಥವಾಗುವ ಮೊದಲೇ ಮತದಾನಕ್ಕೆ ಅವಕಾಶ ನೀಡುವುದು ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
34 ಲಕ್ಷ ಮೇಲ್ಮನವಿಗಳ ‘ಹಿಮಾಲಯದಂತಹ ಸವಾಲು’
ಪಶ್ಚಿಮ ಬಂಗಾಳದಲ್ಲಿ ಸದ್ಯ ಸುಮಾರು 34 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು 19 ನ್ಯಾಯಾಧೀಕರಣಗಳ ಮುಂದೆ ಬಾಕಿ ಇವೆ. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಬೃಹತ್ ಪ್ರಮಾಣದ ಕೆಲಸವನ್ನು “ಹರ್ಕ್ಯುಲಿಯನ್ ಟಾಸ್ಕ್” (ಅತಿ ಕಠಿಣ ಕೆಲಸ) ಎಂದು ಕರೆದಿರುವ ನ್ಯಾಯಾಲಯ, ಟ್ರಿಬ್ಯೂನಲ್ಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
