ಬೆಂಗಳೂರು, ಜು.24: ಹಿರಿಯ ನಾಗರಿಕರಿಗೆ ಸುರಕ್ಷಿತ, ಸ್ವತಂತ್ರ ಮತ್ತು ಗುಣಮಟ್ಟದ ಜೀವನಶೈಲಿಯನ್ನು ಒದಗಿಸುವ ಉದ್ದೇಶದಿಂದ ಪ್ರೈಮಸ್ ಸೀನಿಯರ್ ಲಿವಿಂಗ್ ಹಾಗೂ ಎಚ್ಡಿಎಫ್ಸಿ ಕ್ಯಾಪಿಟಲ್ ಜಂಟಿಯಾಗಿ ₹2,000 ಕೋಟಿ ಮೌಲ್ಯದ ಹೂಡಿಕೆ ಯೋಜನೆ ಘೋಷಿಸಿವೆ. ದೇಶದ ಹಿರಿಯ ನಾಗರಿಕರ ವಸತಿ ಕ್ಷೇತ್ರದಲ್ಲಿ ಇದುವರೆಗಿನ ಅತಿದೊಡ್ಡ ಸಾಂಸ್ಥಿಕ ಹೂಡಿಕೆಗಳಲ್ಲಿ ಇದೂ ಒಂದಾಗಿದೆ.
ಈ ಜಂಟಿ ಸಹಭಾಗಿತ್ವದಡಿ ಭಾರತದ ಆರು ಪ್ರಮುಖ ಮಹಾನಗರಗಳಲ್ಲಿ ವಿಶ್ವದರ್ಜೆಯ ಹಿರಿಯ ನಾಗರಿಕರ ವಸತಿ ಸಮುದಾಯಗಳನ್ನು ನಿರ್ಮಿಸಲಾಗುತ್ತದೆ. ಹಿರಿಯರಿಗೆ ಮನೆ ಖರೀದಿ ಮತ್ತು ಬಾಡಿಗೆ ಆಧಾರಿತ ಎರಡೂ ಮಾದರಿಗಳಲ್ಲಿ ವಸತಿ ಸೌಲಭ್ಯಗಳನ್ನು ಒದಗಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಸ್ವತಂತ್ರ ಜೀವನ ಬಯಸುವ ಹಿರಿಯ ನಾಗರಿಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿವೆ.
ಹಿರಿಯರ ಸಂಖ್ಯೆಯಲ್ಲಿ ವೇಗದ ಏರಿಕೆ
ಸಂಸ್ಥೆಗಳ ಪ್ರಕಾರ, 2050ರ ವೇಳೆಗೆ ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ 34.6 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಜೀವಿತಾವಧಿ, ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಳ ಹಾಗೂ ಉದ್ಯೋಗಕ್ಕಾಗಿ ಯುವಜನರ ವಲಸೆ ಹಿನ್ನೆಲೆಯಲ್ಲಿ ಹಿರಿಯರಿಗೆ ವಿಶೇಷ ವಸತಿ ಸಮುದಾಯಗಳ ಅಗತ್ಯವೂ ಹೆಚ್ಚುತ್ತಿದೆ.
ವಿದೇಶಗಳಲ್ಲಿ ಹಿರಿಯ ನಾಗರಿಕರ ವಸತಿ ಮಾರುಕಟ್ಟೆಯ ಪಾಲು ಸುಮಾರು 6% ಇದ್ದರೆ, ಭಾರತದಲ್ಲಿ ಅದು ಕೇವಲ 1.3% ಮಾತ್ರ. ಹೀಗಾಗಿ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗೆ ಅವಕಾಶವಿದೆ ಎಂದು ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.
ಏನಂದರು ಸಂಸ್ಥೆಗಳ ಮುಖ್ಯಸ್ಥರು?
ಪ್ರೈಮಸ್ ಸೀನಿಯರ್ ಲಿವಿಂಗ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಆದರ್ಶ್ ನರಹರಿ ಮಾತನಾಡಿ, ಸಕ್ರಿಯ ಮತ್ತು ಸ್ವತಂತ್ರ ಜೀವನಶೈಲಿಯನ್ನು ಬಯಸುವ ಹಿರಿಯರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಎಚ್ಡಿಎಫ್ಸಿ ಕ್ಯಾಪಿಟಲ್ನ ಬಂಡವಾಳ ಹಾಗೂ ಸಹಭಾಗಿತ್ವದಿಂದ ಈ ಕ್ಷೇತ್ರದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದು ಹೇಳಿದರು.
ಎಚ್ಡಿಎಫ್ಸಿ ಕ್ಯಾಪಿಟಲ್ನ ಸಿಇಒ ವಿಪುಲ್ ರೂಂಗ್ತಾ ಮಾತನಾಡಿ, ಹಿರಿಯ ನಾಗರಿಕರ ವಸತಿ ಕ್ಷೇತ್ರದಲ್ಲಿ ದೀರ್ಘಾವಧಿಯ ಸಾಂಸ್ಥಿಕ ಬಂಡವಾಳದ ಕೊರತೆ ಇತ್ತು. ಪ್ರೈಮಸ್ ಜೊತೆಗೂಡಿ ಉತ್ತಮ ಗುಣಮಟ್ಟದ ಮೂಲಸೌಕರ್ಯ ಹೊಂದಿರುವ ವಸತಿ ಸಮುದಾಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಪ್ರೈಮಸ್ ಮತ್ತು ಎಚ್ಡಿಎಫ್ಸಿ ಕ್ಯಾಪಿಟಲ್ ಬಗ್ಗೆ
ಪ್ರೈಮಸ್ ಸೀನಿಯರ್ ಲಿವಿಂಗ್ ಈಗಾಗಲೇ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಹಿರಿಯ ನಾಗರಿಕರ ವಸತಿ ಸಮುದಾಯಗಳನ್ನು ನಿರ್ವಹಿಸುತ್ತಿದೆ. ಸಂಸ್ಥೆಗೆ ಜನರಲ್ ಕ್ಯಾಟಲಿಸ್ಟ್ ಹಾಗೂ ಉದ್ಯಮಿ ನಿಖಿಲ್ ಕಾಮತ್ ಅವರ ಬೆಂಬಲವಿದೆ.
ಎಚ್ಡಿಎಫ್ಸಿ ಬ್ಯಾಂಕ್ನ ಅಂಗಸಂಸ್ಥೆಯಾದ ಎಚ್ಡಿಎಫ್ಸಿ ಕ್ಯಾಪಿಟಲ್, ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಪ್ರೈವೇಟ್ ಈಕ್ವಿಟಿ ಸಂಸ್ಥೆಗಳಲ್ಲಿ ಒಂದಾಗಿದ್ದು, 4.5 ಬಿಲಿಯನ್ ಅಮೆರಿಕನ್ ಡಾಲರ್ಗೂ ಅಧಿಕ ಮೌಲ್ಯದ ವಸತಿ ಅಭಿವೃದ್ಧಿ ನಿಧಿಯನ್ನು ನಿರ್ವಹಿಸುತ್ತಿದೆ.
