ಕೊರಟಗೆರೆ, ಜು.24: ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಸಿದ್ದರಬೆಟ್ಟ ಶ್ರೀ ಕ್ಷೇತ್ರದ ಸಸ್ಯಕಾಶಿ ತಪೋಭೂಮಿಯಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ 45ನೇ ಜನ್ಮವರ್ಧಂತಿ ಕಾರ್ಯಕ್ರಮವನ್ನು ಸರಳವಾಗಿ, ಭಕ್ತಿಭಾವದಿಂದ ಆಚರಿಸಲಾಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಆಶೀರ್ವಾದ ಪಡೆದು ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಕೇವಲ ಮಠವನ್ನು ಕಟ್ಟದೇ, ಸಾವಿರಾರು ಜನರ ಮನಸ್ಸುಗಳನ್ನು ಕಟ್ಟಿದ ಮಹಾನ್ ಆಧ್ಯಾತ್ಮಿಕ ಗುರು ಎಂದು ಬಣ್ಣಿಸಿದರು. ಜಾತಿ, ಮತ, ವರ್ಗಭೇದವಿಲ್ಲದೆ ಎಲ್ಲರನ್ನೂ ತಾಯಿ ಹೃದಯದಿಂದ ಸ್ವಾಗತಿಸಿ ಆಶೀರ್ವದಿಸುತ್ತಿರುವ ಶ್ರೀಗಳ ಸೇವೆಯಿಂದ ಸಿದ್ದರಬೆಟ್ಟ ಇಂದು ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿ ಬೆಳೆದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೊರಟಗೆರೆ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಸಮಾಜಸೇವಕ ಪಿ.ಎನ್.ಕೆ. ಕೃಷ್ಣಮೂರ್ತಿ, ಕ್ಷೇತ್ರಕ್ಕೆ ಆಗಮಿಸುವ ಬಡ ಕುಟುಂಬಗಳ ಅನುಕೂಲಕ್ಕಾಗಿ ಮಠದ ಆವರಣದಲ್ಲಿ ಸುಮಾರು ₹1.50 ಕೋಟಿ ವೆಚ್ಚದಲ್ಲಿ ಸಮುದಾಯ ಭವನ (ಕಲ್ಯಾಣ ಮಂಟಪ) ನಿರ್ಮಿಸುವುದಾಗಿ ಘೋಷಿಸಿದರು.
ಶ್ರಾವಣ ಮಾಸದಲ್ಲಿಯೇ ಗುರುಗಳ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು. ಸುಮಾರು ಒಂದೂವರೆ ವರ್ಷಗಳೊಳಗೆ ಕಟ್ಟಡ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಪ್ರತಿವರ್ಷ ನೂರಾರು ನವದಂಪತಿಗಳು ಉಚಿತವಾಗಿ ವಿವಾಹವಾಗುತ್ತಿದ್ದು, ಈ ಸಮುದಾಯ ಭವನ ನಿರ್ಮಾಣದಿಂದ ಬಡ ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. ಮಠದ ಶಿಕ್ಷಣ, ಧ್ಯಾನ, ಅನ್ನದಾಸೋಹ ಸೇರಿದಂತೆ ವಿವಿಧ ಸೇವಾ ಕಾರ್ಯಗಳಿಗೆ ಮುಂದೆಯೂ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿ ಹುಲಿಕುಂಟೆಮಠ, ಶ್ರೀಗಳ ಆಶೀರ್ವಾದ ಜಿಲ್ಲೆಯ ಜನರಿಗೆ ಸದಾ ದೊರೆಯಲಿ ಎಂದು ಹಾರೈಸಿದರು. ಶ್ರೀಗಳ ಮಾರ್ಗದರ್ಶನ ಯುವಜನತೆಗೆ ಬೆಳಕಿನ ದಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಮಠದಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಾಲೆ ನಿರ್ಮಿಸಲು ಸಹಕಾರ ನೀಡುವುದಾಗಿ ಘೋಷಿಸಿದರು.
ಜನ್ಮವರ್ಧಂತಿ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರುದ್ರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು, ಪರ್ವ ಗ್ರೂಪ್ ಸಂಸ್ಥಾಪಕರಾದ ನೀಲೇಶ್, ದರ್ಶನ್, ಮಾವತ್ತೂರು ಮಂಜಣ್ಣ, ಬದ್ರಣ್ಣ, ರೋಟರಿ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.
ವರದಿ : ನರಸಿಂಹಯ್ಯ ಹೊಸಕೋಟೆ
