ಬೆಂಗಳೂರು: “ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ” ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ದೇಶದಲ್ಲೇ ಮೊದಲ ಬಾರಿಗೆ 108 ಆರೋಗ್ಯ ಕವಚ (Arogya Kavacha) ತುರ್ತು ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣ ಸರ್ಕಾರಿ ನಿಯಂತ್ರಣಕ್ಕೆ ತಂದಿದೆ. ಇದರ ಜೊತೆಗೆ ಕೇಂದ್ರೀಕೃತ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಆಗಿರುವ ಹೆಲ್ತ್ ಎಮರ್ಜೆನ್ಸಿ ಆಪರೇಷನ್ಸ್ ಸೆಂಟರ್ (HEOC) ಅನ್ನು ಉದ್ಘಾಟಿಸಲಾಗಿದೆ.
ಈ ಹಿಂದೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 108 ತುರ್ತು ಸೇವೆಯನ್ನು ಇದೀಗ ಸಂಪೂರ್ಣವಾಗಿ ಆರೋಗ್ಯ ಇಲಾಖೆ ನಿರ್ವಹಣೆ ಮಾಡುತ್ತಿದೆ. ಇದರಿಂದ ಸೇವೆಯ ಮೇಲಿನ ಸರ್ಕಾರಿ ನಿಗಾವಳಿ ಮತ್ತು ಕಾರ್ಯಕ್ಷಮತೆ ಮತ್ತಷ್ಟು ಬಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವ್ಯವಸ್ಥೆಯಲ್ಲಿ ಜಿಪಿಎಸ್ ಟ್ರ್ಯಾಕಿಂಗ್, ರಿಯಲ್-ಟೈಮ್ ಮಾನಿಟರಿಂಗ್, ಡಿಜಿಟಲ್ ಡಿಸ್ಪ್ಯಾಚ್ ಸಿಸ್ಟಮ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಆಂಬುಲೆನ್ಸ್ಗಳನ್ನು ವೇಗವಾಗಿ ಸ್ಥಳಕ್ಕೆ ತಲುಪಿಸುವುದು, ತಕ್ಷಣ ವೈದ್ಯಕೀಯ ನೆರವು ಒದಗಿಸುವುದು ಹಾಗೂ ಜೀವ ರಕ್ಷಣೆಯ ಪ್ರಮಾಣವನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ರಾಜ್ಯದಾದ್ಯಂತ ತುರ್ತು ಆರೋಗ್ಯ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸಲು HEOC ಪ್ರಮುಖ ಪಾತ್ರವಹಿಸಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಹೊಸ ವ್ಯವಸ್ಥೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಿಗೆ ತುರ್ತು ವೈದ್ಯಕೀಯ ಸೇವೆಗಳು ಇನ್ನಷ್ಟು ವೇಗವಾಗಿ ದೊರೆಯಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
