ಬೆಂಗಳೂರು: Krutrim ಕಂಪನಿ ತನ್ನ ವ್ಯವಹಾರದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡು ಎಐ ಕ್ಲೌಡ್ ಸೇವೆಗಳತ್ತ ಕೇಂದ್ರೀಕರಿಸಿರುವುದಾಗಿ ಘೋಷಿಸಿದೆ. 2025-26ನೇ ಹಣಕಾಸು ವರ್ಷದಲ್ಲಿ ಕಂಪನಿ ಸುಮಾರು ₹300 ಕೋಟಿ ಆದಾಯ ಗಳಿಸಿದ್ದು, ಇದು ಹಿಂದಿನ ವರ್ಷದಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಇದೇ ವೇಳೆ ಕಂಪನಿ ಮೊದಲ ಬಾರಿಗೆ ಶುದ್ಧ ಲಾಭ ದಾಖಲಿಸಿದ್ದು, ತೆರಿಗೆ ನಂತರದ ಲಾಭ ಪ್ರಮಾಣವು 10%ಕ್ಕಿಂತ ಹೆಚ್ಚು ಇದೆ.
2025ರ ಕೊನೆಯ ಭಾಗದಲ್ಲಿ ಕೈಗೊಂಡ ವ್ಯವಹಾರ ಪುನರ್ವ್ಯವಸ್ಥೆಯ ಭಾಗವಾಗಿ ಚಿಪ್ ವಿನ್ಯಾಸ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸಂಪೂರ್ಣ ಗಮನವನ್ನು ಎಐ ಕ್ಲೌಡ್ ಮೂಲಸೌಕರ್ಯ ನಿರ್ಮಾಣದತ್ತ ಕೇಂದ್ರೀಕರಿಸಲಾಗಿದೆ. ಇದರ ಫಲವಾಗಿ ಕಂಪನಿ ಸಂಪೂರ್ಣವಾಗಿ ಸ್ವದೇಶದಲ್ಲಿ ನಿರ್ಮಿತವಾದ ಫುಲ್-ಸ್ಟ್ಯಾಕ್ ಎಐ ಕ್ಲೌಡ್ ಸೇವೆಯನ್ನು ಅಭಿವೃದ್ಧಿಪಡಿಸಿ ದೊಡ್ಡ ಮಟ್ಟದಲ್ಲಿ ಅನುಷ್ಠಾನಗೊಳಿಸಿದೆ.
ಕ್ರುತ್ರಿಮ್ ಭಾರತದಲ್ಲಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತ ಎಐ ಕ್ಲೌಡ್ ಸೇವೆಗಳನ್ನು ಉತ್ಪಾದನಾ ಮಟ್ಟದಲ್ಲಿ ನೀಡುತ್ತಿರುವ ಕೆಲವೇ ಕಂಪನಿಗಳಲ್ಲೊಂದು. ಈ ಸೇವೆಗಳು ಮೊಬೈಲಿಟಿ, ಮ್ಯಾನ್ಯುಫ್ಯಾಕ್ಚರಿಂಗ್, ಗ್ರಾಹಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸಲು ಸಹಕಾರಿಯಾಗಿದೆ.
ಕಂಪನಿಯ ಈ ಬದಲಾವಣೆ ಆರ್ಥಿಕವಾಗಿ ಸ್ವಾವಲಂಬಿತ ಮಾದರಿಯನ್ನು ರೂಪಿಸಿದ್ದು, ಈಗ ಹೊರಗಿನ ಹೂಡಿಕೆಗಳ ಅಗತ್ಯವಿಲ್ಲದ ಮಟ್ಟಕ್ಕೆ ತಲುಪಿದೆ. ಸಂಸ್ಥಾಪಕರಿಂದಲೂ ಹೆಚ್ಚುವರಿ ಹೂಡಿಕೆ ಅಗತ್ಯವಿಲ್ಲ ಎಂದು ಕಂಪನಿ ತಿಳಿಸಿದೆ.
ಕಂಪನಿಯ ವಕ್ತಾರರ ಪ್ರಕಾರ, “ನಾವು ಲಾಭದಾಯಕತೆ, ಸ್ವಾವಲಂಬನೆ ಮತ್ತು ಮಾರುಕಟ್ಟೆ ವಿಶ್ವಾಸ ಗಳಿಸಿರುವುದು ಮಹತ್ವದ ಹಂತ. ಭಾರತೀಯ ಉದ್ಯಮಗಳಿಗಾಗಿ ಭಾರತೀಯ ಇಂಜಿನಿಯರ್ಗಳಿಂದ ನಿರ್ಮಿತ ಎಐ ಕ್ಲೌಡ್ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ” ಎಂದರು.
ಇತ್ತೀಚೆಗೆ 25ಕ್ಕೂ ಹೆಚ್ಚು ದೊಡ್ಡ ಉದ್ಯಮ ಸಂಸ್ಥೆಗಳು ಕ್ರುತ್ರಿಮ್ ಸೇವೆಯನ್ನು ಬಳಸಲು ಮುಂದಾಗಿದ್ದು, ಟೆಲಿಕಾಂ, ಹಣಕಾಸು, ಆರೋಗ್ಯ, ಲಾಜಿಸ್ಟಿಕ್ಸ್ ಹಾಗೂ ಡಿಜಿಟಲ್ ಕ್ಷೇತ್ರಗಳಲ್ಲಿ ಬಳಕೆ ಹೆಚ್ಚಾಗಿದೆ. ಕಂಪನಿಯ ಜಿಪಿಯು (GPU) ಕಂಪ್ಯೂಟಿಂಗ್ ಸಾಮರ್ಥ್ಯಕ್ಕೂ ಭಾರಿ ಬೇಡಿಕೆ ಇದ್ದು, ಅದರ ಬಹುಪಾಲು ಸಾಮರ್ಥ್ಯ ಈಗಾಗಲೇ ಗ್ರಾಹಕರಿಗೆ ಮೀಸಲಾಗಿದೆ.
ಸ್ವದೇಶಿ ಮೂಲಸೌಕರ್ಯ ಹಾಗೂ ಸ್ವಯಂ ಹಣಕಾಸು ಮಾದರಿಯೊಂದಿಗೆ ಕ್ರುತ್ರಿಮ್, ಭಾರತದಲ್ಲಿ ಎಐ ಕ್ಲೌಡ್ ಸೇವೆಗಳ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತರಿಸಲು ಸಜ್ಜಾಗಿದೆ.
