ಬೆಂಗಳೂರು: ಪರಭಾಷಿಕರಿಗೆ ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಭಾಷೆ, ನೆಲ, ಜಲ ಹಾಗೂ ಕಲೆಯ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ತಹಶೀಲ್ದಾರ್ ಕೆ.ಎಂ. ರೇವಣ್ಣ ಅಭಿಪ್ರಾಯಪಟ್ಟರು.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 16ನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕದ ಬೆಳವಣಿಗೆ ಹಾಗೂ ಕನ್ನಡದ ಉಳಿವಿಗಾಗಿ ಕನ್ನಡಿಗರು, ಹೋರಾಟಗಾರರು, ಸಾಹಿತಿಗಳು ಮತ್ತು ಕಲಾವಿದರು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಕರ್ನಾಟಕಕ್ಕೆ ಪ್ರತಿನಿತ್ಯ ಬರುತ್ತಿರುವ ಪರಭಾಷಿಕರ ಸಂಖ್ಯೆಯ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗೆ ಜಾಗೃತಿ ಮೂಡಿಸುವ ಮತ್ತು ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳು ಸದ್ದಿಲ್ಲದೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳನ್ನು ಗುರುತಿಸಿ ಧನಸಹಾಯ ಹಾಗೂ ಪ್ರೋತ್ಸಾಹ ನೀಡಬೇಕು. ವೈಜ್ಞಾನಿಕ ಯುಗಕ್ಕೆ ತಕ್ಕಂತೆ ಕನ್ನಡದ ಬೆಳವಣಿಗೆಗೆ ಹೊಸ ದಿಕ್ಸೂಚಿ ರೂಪಿಸಬೇಕಿದೆ ಎಂದರು.

ಬದಲಾಗುತ್ತಿರುವ ಕಾಲಘಟ್ಟದಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬದಲಾಗಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಎರಡು ಭಾಷೆಗಳು ಸಾಕಾಗಿದ್ದು, ವ್ಯವಹಾರದ ಅಗತ್ಯಕ್ಕೆ ಅನುಗುಣವಾಗಿ ಇತರ ಭಾಷೆಗಳನ್ನು ಕಲಿತು ಬಳಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕರ್ನಾಟಕದ ಅಭಿವೃದ್ಧಿಗಾಗಿ ಸರ್ಕಾರ ಕೈಗೊಳ್ಳುತ್ತಿರುವ ಕೆಲವು ನಿರ್ಧಾರಗಳು ಕನ್ನಡ ಭಾಷೆಯ ಬೆಳವಣಿಗೆಗೆ ಸವಾಲಾಗುತ್ತಿವೆ. ಕನ್ನಡದ ಪರವಾಗಿ ಗಟ್ಟಿಯಾದ ಕಾನೂನು ಜಾರಿಗೆ ತರುವ ಪ್ರಯತ್ನ ಸರ್ಕಾರದಿಂದ ಆಗಬೇಕು. ಕನ್ನಡ ಭಾಷೆ, ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಗೋಕಾಕ್ ಮಾದರಿಯ ಚಳವಳಿಗಳು ನಡೆಯಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಸಿಸಿರಾ, ಶಾಂತಿ ವಾಸು ಹಾಗೂ ಬಿ. ಶೃಂಗೇಶ್ವರ ಸಂಪಾದಿಸಿ, ನೂರಾರು ಮಂದಿ ಲೇಖನಗಳನ್ನು ಬರೆದು ಅರ್ಪಿಸಿರುವ ಕೆ.ಎಂ. ರೇವಣ್ಣ ಅವರ 80ನೇ ವರ್ಷದ ಅಭಿನಂದನಾ ಗ್ರಂಥ ‘ಆನು ಒಲಿದಂತೆ ಹಾಡುವೆ’ ಕೃತಿಯನ್ನು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಬಿಡುಗಡೆ ಮಾಡಿದರು.
ಬೇಲಿಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಕೆ.ಎಂ. ರೇವಣ್ಣ ಹಾಗೂ ಅವರ ಪತ್ನಿಗೆ ಆಶೀರ್ವಾದ ನೀಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ರೇವಣ್ಣ ದಂಪತಿಗೆ ‘ಕುವೆಂಪು ಸಾಹಿತ್ಯ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು. ಸಮಾಜದಲ್ಲಿ ಸಾಧು-ಸಂತರು, ಸಜ್ಜನರು ಹಾಗೂ ವಿವೇಕಿಗಳು ಬದುಕು ನಡೆಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಕೆ.ಎಂ. ರೇವಣ್ಣ ಅವರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಜಿ. ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಾ. ರಾಮಲಿಂಗೇಶ್ವರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.
ಕಾರ್ಯದರ್ಶಿ ಸಿ. ಹೇಮಾವತಿ, ಸಂಚಾಲಕರಾದ ಡಾ. ಆರ್. ವಾದಿರಾಜ್, ಡಾ. ಕೃಷ್ಣ ಹಾನ್ಬಾಳ್, ಎಲ್. ಬಸವಲಿಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಂಬುಜಾಕ್ಷಿ ಬೀರೇಶ್, ಇಂಚರ ನಟರಾಜ್ ಹಾಗೂ ಭೀಮಪ್ಪ ಪೂಜಾರಿ ಅವರ ಗಾಯನ, ಶ್ರೀಮತಿ ನಯನ ಶಿವಣ್ಣ, ಕು. ಭವ್ಯರವಿಶಂಕರ್ ಮತ್ತು ತಂಡದವರ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ಮಧ್ಯಾಹ್ನ ನಡೆದ ವಿಚಾರ ಸಂಕಿರಣದಲ್ಲಿ ಪ್ರಗತಿಪರ ಲೇಖಕಿ ಇಂದಿರಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಿತು.
ವೇದಿಕೆಯಲ್ಲಿ ಪೊಲೀಸ್ ಇಲಾಖೆಯ ಸಾಹಿತಿಗಳಾದ ರಾಂ.ಕೆ. ಹನುಮಂತಯ್ಯ, ವಿ. ರೇಣುಕಾಪ್ರಸನ್ನ, ಕವಯಿತ್ರಿ ಜಯಶ್ರೀ ರಾಜು, ಪತ್ರಕರ್ತ ಡಾ. ಉದಯರವಿ, ಅರಬಗಟ್ಟೆ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರಾಜ್ಯಮಟ್ಟದ 16ನೇ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ ಅದ್ಧೂರಿಯಾಗಿ ಸಂಪನ್ನಗೊಂಡಿತು.
