ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಎಲೇರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಗೊಲ್ಲಹಳ್ಳಿ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ ಹಾಗೂ ಕಸದ ರಾಶಿಯಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಗ್ರಾಮದ ಪ್ರಮುಖ ರಸ್ತೆಯ ಎರಡೂ ಬದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಚರಂಡಿಗಳಲ್ಲಿ ಹೂಳು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗಿಡ-ಗಂಟಿಗಳು ತುಂಬಿಕೊಂಡಿವೆ. ಚರಂಡಿ ಸ್ವಚ್ಛಗೊಳಿಸದೆ ಇರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆಗಳ ಮೇಲೆ ನಿಂತು ಕೆಸರುಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಮದಲ್ಲಿ ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಮನೆಗಳಿದ್ದರೂ ಮೂಲಸೌಕರ್ಯಗಳಾದ ಕುಡಿಯುವ ನೀರು, ಬೀದಿದೀಪ ಹಾಗೂ ಸಮರ್ಪಕ ಚರಂಡಿ ಸ್ವಚ್ಛತೆ ಮರೀಚಿಕೆಯಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಚೇರಿಗೆ ಸೀಮಿತರಾಗಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಮ್ಮ ಸಮಸ್ಯೆ ಕೇಳುವವರು ಯಾರು?’ ಎಂದು ಪ್ರಶ್ನಿಸಿರುವ ಗ್ರಾಮಸ್ಥರು, ಹಲವು ದಿನಗಳಿಂದ ಚರಂಡಿ ಸ್ವಚ್ಛಗೊಳಿಸದೆ ಇರುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಿದೆ. ಗ್ರಾಮದ ಅಂಗನವಾಡಿ ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ ಎಂದು ತಿಳಿಸಿದ್ದಾರೆ.
ಚರಂಡಿಗಳಲ್ಲಿ ನೀರು ನಿಂತಿರುವುದರಿಂದ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಚರಂಡಿ ಪಕ್ಕದ ಮನೆಗಳ ನಿವಾಸಿಗಳು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಶೀಘ್ರದಲ್ಲೇ ಚರಂಡಿಗಳನ್ನು ಸ್ವಚ್ಛಗೊಳಿಸಿ ಮೂಲಸೌಕರ್ಯ ಕಲ್ಪಿಸದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ: ನರಸಿಂಹಯ್ಯ, ಹೊಸಕೋಟೆ
