ಬೆಂಗಳೂರು: ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ತನ್ನ ಕೃತಕ ಬುದ್ಧಿಮತ್ತೆ (AI) ಆಧಾರಿತ ಭದ್ರತಾ ತಂತ್ರಜ್ಞಾನದ ಮೂಲಕ ಇದುವರೆಗೆ 9,840 ಕೋಟಿಗೂ ಹೆಚ್ಚು ಸ್ಪ್ಯಾಮ್ ಕರೆಗಳನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದೆ.
ಏರ್ಟೆಲ್ನ ಸೇಫ್ ನೆಟ್ವರ್ಕ್ ವ್ಯವಸ್ಥೆಯು 440 ಕೋಟಿ ಸ್ಪ್ಯಾಮ್ ಸಂದೇಶಗಳನ್ನು ಗುರುತಿಸಿದ್ದು, 16.2 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಲಿಂಕ್ಗಳನ್ನು ನಿರ್ಬಂಧಿಸಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಡಿಜಿಟಲ್ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವ ಬೆನ್ನಲ್ಲೇ ಸೈಬರ್ ವಂಚನೆಗಳ ಸ್ವರೂಪವೂ ಸಂಕೀರ್ಣವಾಗುತ್ತಿದೆ. ಸ್ಪ್ಯಾಮ್ ಕರೆ ಹಾಗೂ ಫಿಶಿಂಗ್ ಸಂದೇಶಗಳ ಜೊತೆಗೆ ಇತರರ ಸೋಗಿನಲ್ಲಿ ವಂಚನೆ, ನಕಲಿ ಬ್ಯಾಂಕಿಂಗ್ ಮನವಿಗಳು, ಅಪಾಯಕಾರಿ ಲಿಂಕ್ಗಳು, ಹೂಡಿಕೆ ವಂಚನೆ ಹಾಗೂ ಒಟಿಪಿ ಆಧಾರಿತ ಹಣಕಾಸು ವಂಚನೆಗಳು ಹೆಚ್ಚಾಗುತ್ತಿವೆ.
₹52,976 ಕೋಟಿಗೂ ಅಧಿಕ ನಷ್ಟ
ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರ (I4C) ವರದಿಯನ್ನು ಉಲ್ಲೇಖಿಸಿರುವ ಕಂಪನಿ, ಕಳೆದ ಆರು ವರ್ಷಗಳಲ್ಲಿ ಸೈಬರ್ ವಂಚನೆಗಳಿಂದ ಭಾರತೀಯರು ₹52,976 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.
ಬ್ಯಾಂಕಿಂಗ್, ಹಣ ವರ್ಗಾವಣೆ, ಆರೋಗ್ಯ ಸೇವೆ, ವಾಣಿಜ್ಯ ಹಾಗೂ ಸರ್ಕಾರಿ ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳು ಡಿಜಿಟಲ್ ವ್ಯವಸ್ಥೆಯನ್ನು ಅವಲಂಬಿಸಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಸುರಕ್ಷತೆಗೆ ಟೆಲಿಕಾಂ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ.
2024ರಿಂದ ಎಐ ಆಧಾರಿತ ಸ್ಪ್ಯಾಮ್ ಪತ್ತೆ
ಗ್ರಾಹಕರ ಸುರಕ್ಷತೆಗಾಗಿ ಏರ್ಟೆಲ್ 2024ರಲ್ಲಿ ನೆಟ್ವರ್ಕ್ ಆಧಾರಿತ ಹಾಗೂ AI ಚಾಲಿತ ಸ್ಪ್ಯಾಮ್ ಪತ್ತೆ ವ್ಯವಸ್ಥೆಯನ್ನು ಪರಿಚಯಿಸಿತ್ತು. ನೆಟ್ವರ್ಕ್ ಸಾಮರ್ಥ್ಯ ಮತ್ತು ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸಿರುವ ಈ ವ್ಯವಸ್ಥೆಯು ಬಳಕೆದಾರರಿಗೆ ಬರುವ ಅನುಮಾನಾಸ್ಪದ ಕರೆಗಳು ಮತ್ತು ಸಂದೇಶಗಳನ್ನು ಗುರುತಿಸಲು ನೆರವಾಗುತ್ತದೆ.
ವಿಶೇಷವೆಂದರೆ, ಗ್ರಾಹಕರು ಪ್ರತ್ಯೇಕ ಆ್ಯಪ್ ಡೌನ್ಲೋಡ್ ಮಾಡಬೇಕಾಗಿಲ್ಲ ಅಥವಾ ಪ್ರತ್ಯೇಕವಾಗಿ ದೂರು ಸಲ್ಲಿಸಬೇಕಾಗಿಲ್ಲ. ನೆಟ್ವರ್ಕ್ ಹಂತದಲ್ಲಿಯೇ ಈ ಭದ್ರತಾ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಏರ್ಟೆಲ್ ಸೇಫ್ ನೆಟ್ವರ್ಕ್ನ ಪ್ರಮುಖ ಅಂಶಗಳು
ಒಟಿಪಿ ವಂಚನೆ ತಡೆ: ಬಳಕೆದಾರರಿಂದ ಒಟಿಪಿ ಅಥವಾ ಸೂಕ್ಷ್ಮ ಬ್ಯಾಂಕಿಂಗ್ ಮಾಹಿತಿಯನ್ನು ಪಡೆಯಲು ನಡೆಯುವ ಅನುಮಾನಾಸ್ಪದ ಸಂಭಾಷಣೆಗಳನ್ನು ಗುರುತಿಸಿ, ಅಗತ್ಯವಿದ್ದಲ್ಲಿ ಮಧ್ಯಪ್ರವೇಶಿಸುವ AI ಆಧಾರಿತ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಹಾನಿಕಾರಕ ಲಿಂಕ್ಗಳ ಪತ್ತೆ: ನಕಲಿ ವೆಬ್ಸೈಟ್ಗಳು ಹಾಗೂ ಅಪಾಯಕಾರಿ ಲಿಂಕ್ಗಳನ್ನು ರಿಯಲ್ಟೈಮ್ನಲ್ಲಿ ಗುರುತಿಸಿ ನಿರ್ಬಂಧಿಸುವ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಎಸ್ಎಂಎಸ್, ಮೆಸೇಜಿಂಗ್ ಆ್ಯಪ್ಗಳು, ಇ-ಮೇಲ್ ಹಾಗೂ ಬ್ರೌಸರ್ ರಿಡೈರೆಕ್ಟ್ಗಳ ಮೂಲಕ ಬಂದ 16.2 ಲಕ್ಷಕ್ಕೂ ಹೆಚ್ಚು ಹಾನಿಕಾರಕ ಲಿಂಕ್ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.
ಸ್ಪ್ಯಾಮ್ ಕರೆ–ಸಂದೇಶ ಪತ್ತೆ: ಸೆಪ್ಟೆಂಬರ್ 2024ರಲ್ಲಿ ನೆಟ್ವರ್ಕ್ ಮಟ್ಟದ AI ಸ್ಪ್ಯಾಮ್ ಪತ್ತೆ ವ್ಯವಸ್ಥೆ ಆರಂಭಿಸಿದ ಬಳಿಕ 9,840 ಕೋಟಿಗೂ ಹೆಚ್ಚು ಸ್ಪ್ಯಾಮ್ ಕರೆಗಳು ಮತ್ತು 440 ಕೋಟಿ ಸ್ಪ್ಯಾಮ್ ಸಂದೇಶಗಳನ್ನು ಪತ್ತೆಹಚ್ಚಲಾಗಿದೆ ಎಂದು ಏರ್ಟೆಲ್ ತಿಳಿಸಿದೆ.
ಕರೆ ಮಾಡುವ ಸಂಸ್ಥೆಯ ಹೆಸರು ಪ್ರದರ್ಶನ: ಅಧಿಕೃತ ಸಂಸ್ಥೆಗಳ ಕರೆಗಳು ಮತ್ತು ನಕಲಿ ಸಂಖ್ಯೆಗಳಿಂದ ಬರುವ ಕರೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ನೆರವಾಗುವಂತೆ ಕರೆ ಮಾಡುವ ಸಂಸ್ಥೆಯ ಹೆಸರನ್ನು ಪ್ರದರ್ಶಿಸುವ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ.
