ಬೆಂಗಳೂರು: ಅಸೆಟ್ಜ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರೆಡ್ ಎಫ್ಎಂ ವಾಕಥಾನ್ ಮೇ 10, 2026 ರಂದು ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು. ಆರೋಗ್ಯ ಪಾಲನೆ ಮತ್ತು ಸಮಾಜದ ಒಳಿತಿಗಾಗಿ ನಡೆದ ಈ ನಡಿಗೆಯಲ್ಲಿ ನಗರದ ಸುಮಾರು 5,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ವೇಗವಾಗಿ ಬೆಳೆಯುತ್ತಿರುವ ನಗರ ಜೀವನದಲ್ಲಿ ಆರೋಗ್ಯದ ಮಹತ್ವ ಸಾರಲು 3 ಕಿ.ಮೀ, 5 ಕಿ.ಮೀ ಮತ್ತು 10 ಕಿ.ಮೀ ವಿಭಾಗಗಳಲ್ಲಿ ಈ ವಾಕಥಾನ್ ಅನ್ನು ಆಯೋಜಿಸಲಾಗಿತ್ತು.

ಬೆಳಿಗ್ಗೆ 5:30ಕ್ಕೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಫಿನಿಶರ್ ಮೆಡಲ್ ಗಳು, ಲೈವ್ ಮ್ಯೂಸಿಕ್ ಮತ್ತು ಜುಂಬಾ ಸೆಷನ್ ಗಳು ವಿಶೇಷ ಆಕರ್ಷಣೆಯಾಗಿದ್ದವು. ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ವಾಕಥಾನ್ ಗೆ ಚಾಲನೆ ನೀಡಿ, ಪಾಲ್ಗೊಂಡವರಲ್ಲಿ ಫಿಟ್ ನೆಸ್ ಉತ್ಸಾಹವನ್ನು ತುಂಬಿದರು.
ಸಂದರ್ಭದಲ್ಲಿ ಯೋಜನೆ ಬಗ್ಗೆ ಮಾತನಾಡಿದ ಸೈನಾ ನೆಹ್ವಾಲ್ ಅವರು, “ದೈಹಿಕ ಸಾಮರ್ಥ್ಯ ಯಾವಾಗಲೂ ನನ್ನ ಜೀವನದ ಪ್ರಮುಖ ಭಾಗವಾಗಿದೆ. ಪ್ರತಿಯೊಂದು ಸಣ್ಣ ಹೆಜ್ಜೆಯೂ ನಮ್ಮನ್ನು ದೊಡ್ಡ ಗುರಿಯತ್ತ ಕೊಂಡೊಯ್ಯುತ್ತದೆ ಎಂಬುದನ್ನು ಬ್ಯಾಡ್ಮಿಂಟನ್ ಕೋರ್ಟ್ ನನಗೆ ಕಲಿಸಿದೆ. ಇಂದು ರೆಡ್ ಎಫ್ಎಂ ವಾಕಥಾನ್ ನಲ್ಲಿ ಸಾವಿರಾರು ಬೆಂಗಳೂರಿಗರು ಉದ್ದೇಶಪೂರ್ವಕವಾಗಿ ಹೆಜ್ಜೆ ಹಾಕುತ್ತಿರುವುದನ್ನು ನೋಡುವುದು ಸ್ಫೂರ್ತಿದಾಯಕವಾಗಿದೆ. ಏಕೆಂದರೆ ಇಲ್ಲಿ ಹಾಕುವ ಪ್ರತಿಯೊಂದು ಹೆಜ್ಜೆಯೂ ಹಿಂದುಳಿದ ಮಕ್ಕಳಿಗೆ ಎಐ ಚಾಲಿತ ಶಿಕ್ಷಣ ಸೌಲಭ್ಯವನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಆಂದೋಲನದ ಭಾಗವಾಗಲು ನನಗೆ ಹೆಮ್ಮೆ ಎನಿಸುತ್ತದೆ,” ಎಂದು ತಿಳಿಸಿದರು.
ಅಸೆಟ್ಜ್ ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಸುನಿಲ್ ಪಾರೀಕ್ ಅವರು ಮಾತನಾಡಿ, “ಯೋಗಕ್ಷೇಮ ಎಂಬುದು ಈಗ ಕೇವಲ ಐಷಾರಾಮಿ ಜೀವನಶೈಲಿ ಅಲ್ಲ; ಬದಲಿಗೆ ಯೋಗಕ್ಷೇಮ ಪ್ರಜ್ಞೆಯು ನಗರ ಮೂಲಸೌಕರ್ಯದ ಅವಿಭಾಜ್ಯ ಅಂಗವಾಗುತ್ತಿದೆ. ಉತ್ತಮ ಭವಿಷ್ಯವು ಕೇವಲ ಅತ್ಯಾಧುನಿಕ ಕಟ್ಟಡಗಳಿಂದ ಗುರುತಿಸಲ್ಪಡುವುದಿಲ್ಲ, ಬದಲಿಗೆ ಅಲ್ಲಿನ ಜನರು ಎಷ್ಟು ಸಕ್ರಿಯವಾಗಿ ಚಲಿಸುತ್ತಾರೆ ಮತ್ತು ಪರಸ್ಪರ ಸಂಪರ್ಕ ಹೊಂದಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಎಂದು ಅಸೆಟ್ಜ್ ನಂಬುತ್ತದೆ. ರೆಡ್ ಎಫ್ಎಂ ವಾಕಥಾನ್ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ನಮ್ಮ ಉದ್ಯೋಗಿಗಳು ಮತ್ತು ಸಮುದಾಯದ ಜೊತೆ ಈ ಯೋಜನೆಗೆ ಬೆಂಬಲ ನೀಡಲು ನಮಗೆ ಹೆಮ್ಮೆಯಿದೆ,” ಎಂದರು.
ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ಮಾಜಿ ಸೈನಿಕರ ಸಹಕಾರದೊಂದಿಗೆ ಈ ಕಾರ್ಯಕ್ರಮವು ಅತ್ಯಂತ ಸುರಕ್ಷಿತವಾಗಿ ಮತ್ತು ಸುಗಮವಾಗಿ ಜರುಗಿತು. ಅಸೆಟ್ಜ್ ಕಂಪನಿಯ ಸುಮಾರು 200 ಉದ್ಯೋಗಿಗಳು ಸಹ ಇದರಲ್ಲಿ ಪಾಲ್ಗೊಂಡು ಸಮುದಾಯದ ಒಳಿತಿಗಾಗಿ ಕೈಜೋಡಿಸಿದರು.
