ಅರ್ಜುನ ಭಗವಂತನ ಅಪರಂಪಾರವಾದ ರೂಪ ಮತ್ತು ಆತನ ಶಕ್ತಿಯ ವಿವರಣೆಯನ್ನು ಕೃಷ್ಣನಿಂದ ಕೇಳಿ-ಭಗವಂತನನ್ನು ಭಕ್ತಿಯಿಂದ ಸ್ತುತಿಸಲು ಪ್ರಾರಂಭಿಸುತ್ತಾನೆ. ಮುಂದಿನ ಶ್ಲೋಕಗಳಲ್ಲಿ ಭಗವಂತನ ಅನಂತ ಗುಣವನ್ನು ಅರ್ಜುನ ಸ್ತುತಿಸುವುದನ್ನು ನಾವು ಕಾಣಬಹುದು. [ಇಲ್ಲಿ ಭಗವಂತನ ಗುಣವಿಶೇಷವನ್ನು ಹೇಳುವ ಅನೇಕ ವಿಶೇಷಣಗಳನ್ನು ಶ್ಲೋಕದಲ್ಲಿ ಬಳಸಲಾಗಿದೆ.
ಉದಾಹರಣೆಗೆ: ಹೃಷೀಕೇಶಃ, ಅಕ್ಷರಃ, ಪುರುಷಃ, ಅನಂತವೀರ್ಯಃ, ಅಮಿತವಿಕ್ರಮಃ, ದೇವೇಶಃ, ಇತ್ಯಾದಿ. ಈ ಎಲ್ಲಾ ವಿಶೇಷಣಗಳ ಅರ್ಥವಿವರಣೆಯನ್ನು ನಾವು ಈ ಹಿಂದಿನ ಅಧ್ಯಾಯಗಳಲ್ಲಿ ಸಾಂದರ್ಭಿಕವಾಗಿ ಚರ್ಚಿಸಿರುವುದರಿಂದ ಇಲ್ಲಿ ಆ ಅರ್ಥ ವಿವರಣೆಯನ್ನು ಮರಳಿ ವಿವರಿಸಿಲ್ಲ. ನಾವು ವಿಷ್ಣುಸಹಸ್ರನಾಮದಲ್ಲಿ ಕೂಡ ಭಗವಂತನ ನಾಮವಾಗಿ ಈ ಪದಗಳು ಬಳಕೆಯಾಗಿರುವುದನ್ನು ಕಾಣುತ್ತೇವೆ. ಭಗವಂತನ ಒಂದೊಂದು ನಾಮದ ಹಿಂದೆ ಆತನ ಅನಂತ ಗುಣದ ಅನುಸಂಧಾನವಿದೆ. ಈ ವಿಚಾರವನ್ನು ತಿಳಿದು, ಪ್ರತೀ ಪದದ ಹಿಂದಿರುವ ಅರ್ಥಾನುಸಂಧಾನದೊಂದಿಗೆ ಈ ಶ್ಲೋಕವನ್ನು ನೋಡಿದಾಗ ಮಾತ್ರ ಅದರ ಹಿಂದಿರುವ ಸಂದೇಶದ ಅರಿವಾಗುತ್ತದೆ.ಮುಂದಿನ ಶ್ಲೋಕಗಳನ್ನು ನೋಡುವಾಗ ಓದುಗರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಓದಬೇಕಾಗಿ ಪ್ರಾರ್ಥನೆ.]
ಶ್ಲೋಕ – 36
ಅರ್ಜುನ ಉವಾಚ ।
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತ್ಯನುರಜ್ಯತೇ ಚ ।
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ॥೩೬॥
ಅರ್ಜುನ ಉವಾಚ-ಅರ್ಜುನ ಹೇಳಿದನು :
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತಿ ಅನುರಜ್ಯತೇ ಚ ।
ರಕ್ಷಾಂಸಿ ಭೀತಾನಿ ದಿಶಾಃ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ –ಇಂದ್ರಿಯಗಳ ದೊರೆಯೆ, ಎಲ್ಲ ಸರಿಯೆ: ಜಗತ್ತು ನಿನ್ನ ಕೊಂಡಾಟದಿಂದ ಹಿಗ್ಗುತ್ತಿದೆ; ಒಲಿಯುತ್ತಿದೆ. ರಕ್ಕಸರು ದಿಕ್ಕೆಟ್ಟು ಓಡುತ್ತಿದ್ದಾರೆ. ಸಿದ್ಧರೆಲ್ಲ ಗುಂಪುಗೂಡಿ ಪೊಡಮಡುತ್ತಿದ್ದಾರೆ.
ಈ ಹಿಂದೆ ಹೇಳಿದಂತೆ-ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಇಡೀ ವಿಶ್ವದಲ್ಲಿ ಅನೇಕ ಮಂದಿ ಜ್ಞಾನಿಗಳಿಗೆ, ದೇವತೆಗಳಿಗೆ ಕೂಡಾ ಈ ಅಪರೂಪದ ಭಗವಂತನ ರೂಪ ದರ್ಶನವಾಗಿದೆ. ಅರ್ಜುನ ತನ್ನ ಅಂತರಂಗದಲ್ಲಿ ತನಗೆ ಕಾಣುತ್ತಿರುವ ವಿಚಾರವನ್ನು ಹೇಳುತ್ತಿದ್ದಾನೆ. ಇಷ್ಟೇ ಅಲ್ಲದೆ ಬಾಹ್ಯ ವಸ್ತುಸ್ಥಿತಿ ಕೂಡಾ ಆತನಿಗೆ ಭಗವಂತನಲ್ಲಿ ಕಾಣಿಸುತ್ತಿದೆ. ಅದನ್ನು ಅರ್ಜುನ ಇಲ್ಲಿ ವಿವರಿಸುತ್ತಿದ್ದಾನೆ- “ಋಷಿಗಳು, ಜ್ಞಾನಿಗಳು ನಿನ್ನ ಗುಣಗಾನ ಮಾಡುತ್ತಿದ್ದಾರೆ. ನಿನ್ನನ್ನು ಕೊಂಡಾಡಿ ರೋಮಾಂಚನಗೊಳ್ಳುತ್ತಿದ್ದಾರೆ. ದುಷ್ಟಶಕ್ತಿಗಳು ನಿನ್ನನ್ನು ಕಂಡು ಹೆದರಿ ಓಡುತ್ತಿವೆ. ಸಾತ್ವಿಕರು ಸಿದ್ಧರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇದೆಲ್ಲವೂ ಯುಕ್ತವೇ ಸರಿ-ಓ ಹೃಷೀಕೇಶಃ”.
