ಶ್ಲೋಕ – 10 ಮತ್ತು 11
ಅನೇಕವಕ್ತ್ರನಯನಮನೇಕಾದ್ಭುತದರ್ಶನಮ್ ।
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ॥೧೦॥
ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್ ।
ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಮ್ ॥೧೧॥
ಅನೇಕ ವಕ್ತ್ರ ನಯನಮ್ ಅನೇಕ ಅದ್ಭುತ ದರ್ಶನಮ್ ।
ಅನೇಕ ದಿವ್ಯ ಆಭರಣಮ್ ದಿವ್ಯ ಅನೇಕ ಉದ್ಯತ ಆಯುಧಮ್ ||
ದಿವ್ಯ ಮಾಲ್ಯಾ ಅಂಬರ ಧರಮ್ ದಿವ್ಯ ಗಂಧ ಅನುಲೇಪನಮ್ ।
ಸರ್ವಾಶ್ಚರ್ಯಮಯಮ್ ದೇವಮನಂತಮ್ ವಿಶ್ವತೋಮುಖಮ್ –ಎಣಿಕೆಯಿರದ ಬಾಯಿ ಕಣ್ಣುಗಳ ರೂಪ. ಎಣಿಕೆಯಿರದ ಅಚ್ಚರಿಯ ನೋಟಗಳ ರೂಪ. ಎಣಿಕೆಯಿರದ ಚಲುವಾಭರಣಗಳ ರೂಪ. ಎಣಿಕೆಯಿರದ ಹೊಳೆಯುವಾಯುಧಗಳನ್ನು ಮೇಲೆತ್ತಿ ಹಿಡಿದ ರೂಪ. ಹೊಳೆವ ಹೂದಂಡೆಗಳನ್ನಿಟ್ಟ ಉಡಿಗೆಗಳ ತೊಟ್ಟ ರೂಪ. ಹೊಳೆವ ಗಂಧ ಬಳಿದ ರೂಪ. ಎಲ್ಲ ಅಚ್ಚರಿಗಳ ಸೆಲೆ. ಎಲ್ಲೆಡೆಯು ತುಂಬಿ ತುದಿಯಿರದ ರೂಪ.
ಕೃಷ್ಣ ನಮ್ಮೆಲ್ಲರಂತೆ ಮನುಷ್ಯರ ಆಕಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಆದರೆ ಈ ಕ್ಷಣದಲ್ಲಿ ಎಲ್ಲಿ ನೋಡಿದರಲ್ಲಿ ಕೃಷ್ಣನ ಮುಖ, ಅಲ್ಲಿ ಸೇರಿರುವ ಪ್ರತಿಯೊಂದು ಜೀವಿಯ ಒಳಗೆ, ಹೊರಗೆ ಎಲ್ಲೆಲ್ಲೂ ಕೇವಲ ಕೃಷ್ಣನ ಮುಖ ಕಾಣುತ್ತಿದೆ. ಸಂಜಯನಿಗೆ ಅಲ್ಲಿ ಆನೆ, ಕುದುರೆ, ಸೈನಿಕರು ಕಾಣಿಸಲಿಲ್ಲ. ಬದಲಿಗೆ ಎಲ್ಲೆಡೆ, ಎಲ್ಲರೊಳಗೆ ತುಂಬಿರುವ ಆ ಭಗವಂತ ಕಾಣಿಸಿಕೊಂಡ. ಭಗವಂತನ ಈ ರೂಪವನ್ನು ವರ್ಣಿಸುವುದು ಅಸಾಧ್ಯ. ಇದನ್ನು ಕೇವಲ ನೋಡಿ ಅನುಭವಿಸಬೇಕು. ಅದೊಂದು ಅಚ್ಚರಿ. ಸರ್ವಾಭರಣಗಳಿಂದ ಶೋಭಿಸುವ, ದಿವ್ಯವಾದ ಆಯುಧಗಳನ್ನು ಹಿಡಿದಿರುವ, ಹೂವಿನ ಮಾಲೆಗಳನ್ನಿಟ್ಟ ಉಡುಪನ್ನು ತೊಟ್ಟ, ಹೊಳೆವ ಗಂಧ ಬಳಿದ, ಸರ್ವಾಶ್ಚರ್ಯ ಸ್ವರೂಪ, ವಿಸ್ಮಯ ಮೂರ್ತಿ ಭಗವಂತ ಯುದ್ಧರಂಗದಲ್ಲಿ ತನ್ನ ವಿಶ್ವರೂಪವನ್ನು ತೋರಿದ.
