ಶ್ಲೋಕ – 10
ಕಾಮಮಾಶ್ರಿತ್ಯ ದುಷ್ಪೂರಂ ಡಂಭಮಾನಮದಾನ್ವಿತಾಃ।
ಮೋಹಾದ್ ಗೃಹೀತ್ವಾSಸದ್ ಗ್ರಾಹಾನ್ ಪ್ರವರ್ತಂತೇSಶುಚಿವ್ರತಾಃ ॥೧೦॥
ಕಾಮಮ್ ಆಶ್ರಿತ್ಯ ದುಷ್ಪೂರಂ ಡಂಭ ಮಾನ ಮದ ಅನ್ವಿತಾಃ।
ಮೋಹಾತ್ ಗೃಹೀತ್ವಾ ಅಸತ್ ಗ್ರಾಹಾನ್ ಪ್ರವರ್ತಂತೇ ಅಶುಚಿ ವ್ರತಾಃ –ತಣಿಯದ ಬಯಕೆಯ ಬೆನ್ನುಹತ್ತಿ ಬೂಟಾಟಿಕೆ, ಬಿಂಕ ಮತ್ತು ಸೊಕ್ಕಿಗೆ ತುತ್ತಾದವರು. ಕೊಳಕು ನಡೆಯ ಈ ಮಂದಿ ತಿಳಿಗೇಡಿತನದಿಂದ ತಪ್ಪು ಗ್ರಹಿಕೆಗಳನ್ನೆ ಕಟ್ಟಿಕೊಂಡು ಬಾಳುತ್ತಾರೆ.
ಆಸುರೀ ಸ್ವಭಾವದವರ ಬಯಕೆಗೆ ಕೊನೆ ಇರುವುದಿಲ್ಲ. ಎಷ್ಟು ಬಂದರೂ ಇನ್ನಷ್ಟರಾಸೆ. ಉದಾಹರಣೆಗೆ ಕೆಲಸವೇ ಇಲ್ಲದಾಗ ಒಂದು ಕೆಲಸದ ಆಸೆ, ಕೆಲಸ ಸಿಕ್ಕಿದಾಗ ಹೆಚ್ಚು ಸಂಬಳದ ಆಸೆ, ಸಂಬಳ ಬಂದಾಗ ಆ ಸಂಬಳ ತನ್ನ ಪಕ್ಕದ ಮನೆಯವನಿಗಿಂತ ಕಡಿಮೆ-ಅದಕ್ಕಾಗಿ ಇನ್ನೂ ಹೆಚ್ಚಿನ ಸಂಬಳದ ಆಸೆ, ದೊಡ್ಡ ಹುದ್ದೆಯ ಆಸೆ, ಹೀಗೆ ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲ. ಈ ದಾಹವನ್ನು ಪೂರೈಸಲು ಸಾಧ್ಯವೇ ಇಲ್ಲ. ಪುರಾಣದಲ್ಲಿ ಹೇಳುವಂತೆ ಹೇಗೆ ಪಾತಾಳವನ್ನು ಮಣ್ಣುಹಾಕಿ ಮುಚ್ಚಲು ಸಾಧ್ಯವಿಲ್ಲವೋ ಹಾಗೆ ಮನುಷ್ಯನ ಬಯಕೆಯನ್ನು ಪೂರೈಸಲು ಸಾಧ್ಯವಿಲ್ಲ. ನಮಗೆ ಎಷ್ಟೇ ಹಣ ಸಿಕ್ಕಿದರೂ ಕೂಡ ನಾವು ಅದರ ಬಲಬದಿಯಲ್ಲಿ ಒಂದು ಸೊನ್ನೆ ಸೇರಿಸಿಕೊಂಡು ಕಡಿಮೆಯಾಯಿತು ಎಂದು ಕೊರಗುತ್ತೇವೆ ಮತ್ತು ಸಂತೋಷವನ್ನು ಮರೆಯುತ್ತೇವೆ. ಕಠೋಪನಿಷತ್ತಿನಲ್ಲಿ- “ನಿನಗೆ ಎಷ್ಟು ಬೇಕೋ ಅಷ್ಟು ಧನವನ್ನು ಕೊಡುತ್ತೇನೆ” ಎಂದು ಯಮ ಹೇಳಿದಾಗ, ನಚಿಕೇತ ಹೇಳುತ್ತಾನೆ: “ನ ವಿತ್ತೇನ ತರ್ಪಣೀಯೋ ಮನುಷ್ಯಃ” ಎಂದು. ಅಂದರೆ “ಮನುಷ್ಯನ ಧನದ ಬಯಕೆಯನ್ನು ಪೂರೈಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು. ಸಾಕು ಎನ್ನುವುದು ದೈವೀ ಸ್ವಭಾವ, ಬೇಕು ಎನ್ನುವುದು ಆಸುರೀ ಸ್ವಭಾವ. ಹೀಗೆ ಆಸುರೀ ಸ್ವಭಾವದವರು ಬಯಕೆಗಳ ಬೆನ್ನುಹತ್ತಿ, ಆ ತೀರದ ಬಯಕೆಯನ್ನು ತೀರಿಸಿಕೊಳ್ಳುವುದಕ್ಕೊಸ್ಕರ ಮಾಡಬಾರದ್ದನ್ನು ಮಾಡುತ್ತಾರೆ. ಇವರ ಜೀವನವೇ ಡಂಭಾಚಾರ. ಬಿಗುಮಾನ, ದುರಹಂಕಾರ, ನಾಟಕೀಯವಾದ ಬದುಕಿನಿಂದ ಇನ್ನೊಬ್ಬರಿಗೆ ಮೋಸ ಮಾಡುವುದು. ಹೀಗೆ ನಡೆ ನುಡಿಯಲ್ಲಿ ಸ್ವಚ್ಚತೆ ಇಲ್ಲದ ಕೊಳಕು ಬದುಕು ಇವರದ್ದಾಗಿರುತ್ತದೆ.
