ಶ್ಲೋಕ – 18
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮಾತ್ಮಪರದೇಹೇಷು ಪ್ರದ್ವಿಷಂತೋSಭ್ಯಸೂಯಕಾಃ ॥೧೮॥
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮ್ ಆತ್ಮ ಪರದೇಹೇಷು ಪ್ರದ್ವಿಷಂತಃ ಅಭ್ಯಸೂಯಕಾಃ –ಹಮ್ಮು, ಬಲತ್ಕಾರ, ಸೊಕ್ಕು, ಬಯಕೆ, ಸಿಡುಕುಗಳ ನೆಲೆಯಾದವರು. ತನ್ನ ಮತ್ತು ಪರರ ದೇಹದೊಳಗಿರುವ ನನ್ನನ್ನು ನಂಬದೆ ನಿರಾಕರಿಸುವವರು. ಇನ್ನೊಬ್ಬರ ಏಳಿಗೆಗೆ ಕಿಚ್ಚುಪಡುವವರು.
ಇವರ ಮೂಲ ಆಸ್ತಿ- ಅಹಂಕಾರ, ದರ್ಪ, ಕಾಮ ಮತ್ತು ಕ್ರೋಧ. ನನ್ನನ್ನು ಮೀರಿಸುವವರ್ಯಾರಿದ್ದಾರೆ? ನಾನೇ ದೊಡ್ಡ ಮನುಷ್ಯ ಎನ್ನುವ ಅಹಂಕಾರ, ಅದಕ್ಕೆ ಬೆಂಬಲ ಧನ ಮತ್ತು ಅಧಿಕಾರ ಬಲ, ಇದರಿಂದ ಇನ್ನೊಬ್ಬರನ್ನು ತಿರಸ್ಕಾರದಿಂದ ಕಾಣುವ ದರ್ಪ. ತೀರದ ಬಯಕೆಗಳು, ಅವು ಈಡೇರಲಿಲ್ಲ ಎನ್ನುವ ಕೋಪ-ಇದೇ ಅವರ ಅಸ್ತಿತ್ವ. ಕೃಷ್ಣ ಹೇಳುತ್ತಾನೆ: “ಎಲ್ಲರೊಳಗಿರುವ ‘ನನ್ನನ್ನು’ ನಂಬದೆ ನಿರಾಕರಿಸುತ್ತಾರೆ” ಎಂದು. ಇದು ಯಾವುದೋ ಕಾರಣ ನಿಮಿತ್ತ ತಾತ್ಕಾಲಿಕವಾಗಿ ಭಗವಂತನನ್ನು ನಿರಾಕರಿಸುವುದಲ್ಲ, ಬದಲಿಗೆ ಸ್ವರೂಪತಃ ಭಗವಂತನನ್ನು ನಿರಾಕರಿಸುವುದು. ಇಂತವರು ಇನ್ನೊಬ್ಬರ ಜ್ಞಾನ ಮತ್ತು ಧನ ಸಂಪತ್ತನ್ನು ನೋಡಿ ಸದಾ ಅಸೂಯೆ ಪಡುತ್ತಿರುತ್ತಾರೆ.
ಹೀಗೆ ಆಸುರೀ ಜನರ ಸ್ವಭಾವ, ಅವರ ಯೋಚನೆಗಳು, ಅವರ ನಡವಳಿಕೆಗಳನ್ನು ಕೂಲಂಕುಶವಾಗಿ ಕೃಷ್ಣ ವರ್ಣಿಸಿದ. ಮುಂದೆ ಕೃಷ್ಣ ಇಂಥಹ ಆಸುರೀ ಜನರನ್ನು ಭಗವಂತ ಏನು ಮಾಡುತ್ತಾನೆ? ಅವರ ಗತಿ ಏನಾಗುತ್ತದೆ ಎನ್ನುವುದನ್ನು ವರ್ಣಿಸುತ್ತಾನೆ.
