ಶ್ಲೋಕ – 14
ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್ ।
ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ॥೧೪॥
ದೇವ ದ್ವಿಜ ಗುರು ಪ್ರಾಜ್ಞ ಪೂಜನಂ ಶೌಚಮ್ ಆರ್ಜವಮ್ ।
ಬ್ರಹ್ಮಚರ್ಯಮ್ ಅಹಿಂಸಾ ಚ ಶಾರೀರಂ ತಪಃ ಉಚ್ಯತೇ –ದೇವತೆಗಳನ್ನು, ಅರಿವಿನಿಂದ ಮರುಹುಟ್ಟು ಪಡೆದವರನ್ನು, ಗುರುಗಳನ್ನು ಮತ್ತು ತುಂಬ ತಿಳಿದವರನ್ನು ಗೌರವಿಸುವುದು, ನೈರ್ಮಲ್ಯ, ನೇರ ನಡೆ, ಬ್ರಹ್ಮಚರ್ಯ ಮತ್ತು ಇನ್ನೊಬ್ಬರಿಗೆ ಕಾಟ ನೀಡದಿರುವುದು ಶರೀರದ ತಪಸ್ಸು ಎನಿಸುತ್ತದೆ.
ದೇವರ ಪ್ರತೀಕ ಎಲ್ಲಿ ಕಂಡಿತೋ ಅಲ್ಲಿ ತಲೆಬಾಗುವುದು; ಜ್ಞಾನಿಗಳಿಗೆ ಗೌರವ ಕೊಡುವುದು; ಗುರುವಿಗೆ ತಲೆಬಾಗುವುದು; ಭಗವದ್ಭೂತಿಯಿಂದ ಭಗವಂತನನ್ನು ಅನುಭವಿಸಿದ ಅನುಭಾವಿಗಳಾದ ಪ್ರಾಜ್ಞರನ್ನು ಗೌರವಿಸುವುದು- ಇವೆಲ್ಲವೂ ಶರೀರ ತಪಸ್ಸು ಎನಿಸುತ್ತದೆ. ಇದರ ಜೊತೆಗೆ ಶುಚಿತ್ವವನ್ನು ಕಾಪಾಡಿಕೊಂಡು ಬದುಕುವುದು, ನೇರ ನಡೆ-ನುಡಿ, ಬ್ರಹ್ಮಚರ್ಯ ಪಾಲನೆ ಹಾಗು ಇನ್ನೊಬ್ಬರಿಗೆ ನಮ್ಮಿಂದ ತೊಂದರೆಯಾಗದಂತೆ ಬದುಕುವುದು ಶರೀರದ ತಪಸ್ಸು. [ಈ ಶ್ಲೋಕದಲ್ಲಿ ಹೇಳಿರುವ ಶೌಚಮ್, ಆರ್ಜವಮ್ ಮತ್ತು ಅಹಿಂಸಾ-ಈ ಗುಣಗಳ ಪೂರ್ಣ ವಿವರಣೆಯನ್ನು ಹದಿನಾರನೇ ಅಧ್ಯಾಯದ ಪ್ರಾರಂಭಿಕ ಶ್ಲೋಕದಲ್ಲಿ ವಿವರಿಸಲಾಗಿದೆ]. ಇಲ್ಲಿ ‘ಬ್ರಹ್ಮಚರ್ಯ ಪಾಲನೆ’ ಅಂದರೆ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವುದು; ಅದಕ್ಕೆ ಪೂರಕವಾಗಿ ವೇದಾಧ್ಯಯನ ಮಾಡುವುದು ಹಾಗು ಅಧ್ಯಯನಕ್ಕೆ ಪೂರಕವಾಗಿ ದೈಹಿಕ ಬ್ರಹ್ಮಚರ್ಯ ಪಾಲನೆ. ದೈಹಿಕವಾಗಿ ಪೂರ್ಣ ಬ್ರಹ್ಮಚರ್ಯ ಕೇವಲ ಸನ್ಯಾಸಿಗಳಿಗೆ ಮತ್ತು ಬ್ರಹ್ಮಚಾರಿಗಳಿಗೆ ಅನ್ವಯಿಸುತ್ತದೆ. ಗ್ರಹಸ್ಥರಾದವರು ಈ ರೀತಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಗ್ರಹಸ್ಥರಲ್ಲಿ ಬ್ರಹ್ಮಚರ್ಯ ಪಾಲನೆ ಎಂದರೆ- ಅವರು ಸ್ವಚ್ಛಂದ ಕಾಮಿಗಳಾಗದೆ, ಗ್ರಹಸ್ಥಧರ್ಮ ಪಾಲನೆಯ ಆವರಣದಲ್ಲಿ ಬದುಕುವುದು ಎಂದರ್ಥ. ಹೀಗೆ ಭಗವಂತನಲ್ಲಿ ಶರಣಾಗತಿ; ಜ್ಞಾನಿಗಳಿಗೆ, ಗುರುಗಳಿಗೆ, ಪ್ರಾಜ್ಞರಿಗೆ ಗೌರವ ಕೊಡುವುದು, ಶುಚಿತ್ವವನ್ನು ಕಾಪಾಡಿಕೊಳ್ಳುವುದು, ನೇರ ನಡೆ ನುಡಿ, ಬ್ರಹ್ಮಚರ್ಯ ಪಾಲನೆ ಮತ್ತು ಅಹಿಂಸೆಯಿಂದ ಬದುಕುವುದು-ಶಾರೀರಿಕ ತಪಸ್ಸು . ನಾವು ಸಾಮಾಜಿಕವಾಗಿ ಸಭ್ಯರಾಗಿ ಬದುಕಲು ಈ ತಪಸ್ಸು ಬೇಕೇಬೇಕು. ಮನುಷ್ಯನಾದವನು ಅನುಸರಿಸಬೇಕಾದ ದೈಹಿಕ ನೀತಿಗಳಿವು.
