ಶ್ಲೋಕ – 20
ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।
ಅವಿಭಕ್ತಂ ವಿಭಕ್ತೇಷು ತಜ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥೨೦॥
ಸರ್ವಭೂತೇಷು ಯೇನ ಏಕಂ ಭಾವಂ ಅವ್ಯಯಮ್ ಈಕ್ಷತೇ ।
ಅವಿಭಕ್ತಂ ವಿಭಕ್ತೇಷು ತತ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ – ಎಲ್ಲ ಜೀವಿಗಳಲ್ಲಿ ಬದಲಾಗದ ಒಂದು ಪರತತ್ವವನ್ನು, ಬಗೆಬಗೆಯ ವಸ್ತುಗಳಲ್ಲಿ ಒಂದೆ ಬಗೆಯ ಭಗವಂತನನ್ನು ಕಾಣುವ ತಿಳಿವು ಸಾತ್ವಿಕ ಎಂದು ತಿಳಿ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ(೪-೫-೧೧)ಹೇಳುವಂತೆ: “ಅಸ್ಯ ಮಹತೋ ಭೂತಸ್ಯ ನಿಶ್ವಸಿತಮ್”- ‘ಅಂದರೆ ಇಡೀ ಪ್ರಪಂಚ ಆ ಮಹಾಭೂತದ ಉಸಿರಿನ ಉದ್ಗಾರ’. ವಿಷ್ಣು ಸಹಸ್ರನಾಮದಲ್ಲಿ ಹೇಳುತ್ತಾರೆ: “ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ” ಎಂದು. ಅಂದರೆ ಒಬ್ಬನೇ ಒಬ್ಬ ವಿಷ್ಣು ಹಿರಿಯ ಚೇತನ(ಮಹಾಭೂತ); ಅಲ್ಪ ಚೇತನಗಳು(ಭೂತಗಳು) ಹಲವಾರು ಎಂದು. ಗೀತೆಯ ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಅರಿವಿನ ಬಗ್ಗೆ ಹೇಳುತ್ತ ಹೇಳುತ್ತಾನೆ: “ಪರಸ್ಪರ ಭಿನ್ನವಾದ, ಒಂದರಂತೆ ಇನ್ನೊಂದಿಲ್ಲದ, ವಿಲಕ್ಷಣವಾದ ಜೀವಪ್ರಪಂಚದಲ್ಲಿ(ಸರ್ವಭೂತೇಷು)- ಯಾವ ಭೇದವೂ ಇಲ್ಲದೆ, ಪೂರ್ಣ ಗುಣಕ್ರಿಯೆಯಲ್ಲಿ ಅಖಂಡ ಸತ್ಯವಾಗಿರುವ ಒಂದು ತತ್ವ ನೆಲೆಸಿದೆ. ಅನಂತದಲ್ಲಿ ಏಕವಾಗಿರುವ, ತ್ರೈಗುಣ್ಯವರ್ಜಿತ ಭಗವಂತನೆಂಬ ಈ ತತ್ವ ಯಾವ ಅರಿವಿಗೆ ಗೋಚರವಾಗುತ್ತದೋ ಆ ಅರಿವು ಸಾತ್ವಿಕ” ಎಂದು.
