ಶ್ಲೋಕ – 19
ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ ॥೧೯॥
ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧಾ ಏವ ಗುಣಭೇದತಃ ।
ಗುಣತ್ರಯಗಳ ಬಗ್ಗೆ ಹಿಂದೆ ಸಾಕಷ್ಟು ವಿವರಗಳನ್ನು ಕೊಟ್ಟಿದ್ದ ಕೃಷ್ಣ, ಇಲ್ಲಿ ಜೀವನಕ್ಕೆ ಬಹಳ ಮುಖ್ಯವಾದ ತ್ರೈಗುಣ್ಯ ವಿದ್ಯೆಯನ್ನು ವಿವರಿಸಿದ್ದಾನೆ.
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವತ್ ಶೃಣು ತಾನಿ ಅಪಿ – ಅರಿವು, ಕಾಯಕ ಮತ್ತು ಮಾಡುವಾತ ಕೂಡ ಗುಣಗಳ ಭೇದದಿಂದ ಮೂರು ತೆರ ಎಂದು ಗುಣಗಳ ಎಣಿಕೆಯ ಪ್ರಕರಣದಲ್ಲಿ [ವೈದಿಕ ಸಾಖ್ಯ ಶಾಸ್ತ್ರದಲ್ಲಿ] ಹೇಳಲಾಗಿದೆ. ಅವುಗಳನ್ನು ಹಾಗೆಯೇ ಆಲಿಸು.
ಪ್ರತಿಯೊಬ್ಬನ ಬದುಕಿನಲ್ಲಿರುವ ಮೂರು ಪ್ರಮುಖ ಘಟಕಗಳೆಂದರೆ ಅರಿವು(ಜ್ಞಾನ), ಕಾಯಕ(ಕರ್ಮ) ಮತ್ತು ಕರ್ತಾ(ಮಾಡುವಾತ). ಏನನ್ನೇ ಮಾಡುವುದಾದರೂ ಕೂಡ ಒಂದು ತಿಳುವಳಿಕೆಯಿಂದ ಮಾಡುತ್ತೇವೆ-ಅದು ಜ್ಞಾನ; ಆ ತಿಳುವಳಿಕೆಯಿಂದ ‘ಮಾಡುವುದು’-ಕರ್ಮ; ಜ್ಞಾನ ಮತ್ತು ಕರ್ಮಗಳಿಗೆ ಆಶ್ರಿತನಾಗಿರತಕ್ಕಂತವ-ಕರ್ತಾ. ಈ ಮೂರೂ ಕೂಡ ಗುಣತ್ರಯ ವಿಭಾಗಕ್ಕೆ ಒಳಪಟ್ಟು ಪ್ರತಿಯೊಂದೂ ಮತ್ತೆ ಮೂರು ವಿಧವಾಗಿದೆ. ಶಾಸ್ತ್ರದಲ್ಲಿ ಎಲ್ಲಿ ಗುಣಗಳ ಪರಿಗಣನೆ ಆಗುತ್ತದೋ ಅಲ್ಲಿ ಈ ವಿಷಯ ಹೇಳಿದ್ದಾರೆ ಮತ್ತು ಭಗವಂತ ಕಪಿಲವಾಸುದೇವನಾಗಿ ಜಗತ್ತಿಗೆ ಕೊಟ್ಟ ‘ಪರಮಸಾಂಖ್ಯದಲ್ಲಿ’ ಇದನ್ನು ಹೇಳಲಾಗಿದೆ. ಇದು ಕಪಿಲ ವಾಸುದೇವನಿಂದ ಮೊಟ್ಟಮೊದಲು ಹೇಳಲ್ಪಟ್ಟ, ಪುರಾತನ ಕಾಲದಿಂದಲೂ ಇದ್ದ, ಜಗತ್ತಿಗೆ ಹೇಳಬೇಕಾದ ವಿಷಯಗಳಲ್ಲೇ ಅತ್ಯಂತ ಪ್ರಕೃಷ್ಟವಾದ ವಿಷಯ. ತ್ರೈಗುಣ್ಯವಿಲ್ಲದೆ ಜೀವನವೇ ಇಲ್ಲ. ನಮ್ಮ ಬದುಕಿನ ಎಲ್ಲ ಮುಖದಲ್ಲೂ ವ್ಯಾಪಿಸಿರುವ ಈ ತ್ರೈಗುಣ್ಯವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ ನಮ್ಮ ಬದುಕನ್ನು ತಿದ್ದಿಕೊಳ್ಳಲು ಸಾಧ್ಯವಿಲ್ಲ ಮತ್ತು ತ್ರಿಗುಣಾತೀತ ಭಗವಂತನ ಕಡೆಗೆ ಸಾಗಲು ಸಾಧ್ಯವಿಲ್ಲ. “ಅತ್ಯಂತ ಪುರಾತನವಾದ ಈ ಮೂಲಭೂತ ಸತ್ಯವನ್ನು ನಾನು ನಿನಗೆ ತದ್ವತ್ತಾಗಿ ಹೇಳುತ್ತೇನೆ -ಅದನ್ನು ಗಮನವಿಟ್ಟು ಆಲಿಸು” ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ.
