ಶ್ಲೋಕ – 22
ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ ।
ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್ ॥೨೨॥
ಉಚ್ಚಾರಣೆ- ಪುರುಷಃ ಸಃ ಪರಃ ಪಾರ್ಥ ಭಕ್ತ್ಯಾ ಲಭ್ಯ ತು ಅನನ್ಯ ಯಾ ।
ಯಸ್ಯ ಅಂತಸ್ಥಾನಿ ಭೂತಾನಿ ಯೇನ ಸರ್ವಮ್ ಇದಮ್ ತತಮ್ –
ಪಾರ್ಥ, ಆ ಪರಮ ಪುರುಷ ಅವನಿಗೇ ಮೀಸಲಾದ ಭಕ್ತಿಗೆ ಮಾತ್ರವೆ ಎಟುಕುವವನು. ಅವನ ಒಳಗೆ ಇಡಿಯ ವಿಶ್ವವಿದೆ. ಅವನು ಈ ಎಲ್ಲವನ್ನು ತಬ್ಬಿ ನಿಂತಿದ್ದಾನೆ.
ಈ ಬ್ರಹ್ಮಾಂಡ ಮತ್ತು ಪಿಂಡಾಂಡವೆಂಬ ಪುರದಲ್ಲಿದ್ದು ಎಲ್ಲವನ್ನೂ ನಿಯಂತ್ರಿಸುವ ಭಗವಂತ ಸರ್ವ ಶಬ್ದವಾಚ್ಯ. ಇಂತಹ ಭಗವಂತನನ್ನು ಒಲಿಸಿಕೊಳ್ಳಲು ಇರುವ ಏಕಮಾತ್ರ ಉಪಾಯ ಭಕ್ತಿ. ಭಕ್ತಿ ಇಲ್ಲದ ಯಾವ ಕರ್ಮದಿಂದಲೂ ಆತನನ್ನು ಸೇರಲು ಸಾಧ್ಯವಿಲ್ಲ. ಭಗವಂತನ ಸಾಕ್ಷಾತ್ಕಾರ ಮತ್ತು ಮೋಕ್ಷಕ್ಕೆ ಏಕಮಾತ್ರ ಸಾಧನ ಅನನ್ಯವಾದ ಏಕಭಕ್ತಿ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನ ಒಡಲಲ್ಲಿಟ್ಟು ರಕ್ಷಿಸಿ, ಸೃಷ್ಟಿ ಕಾಲದಲ್ಲಿ ಅಂತರ್ಯಾಮಿಯಾಗಿದ್ದು ಮಾಡಬೇಕಾದ ಕಾರ್ಯವನ್ನೂ ಮಾಡಿಸಿ,
ಅನುದಿನ ಅನಂತ ಕಾಲದಲ್ಲಿ ಒಳಗೂ ಹೊರಗೂ ತುಂಬಿ ರಕ್ಷಣೆ ಮಾಡುವ ಆ ಭಗವಂತನನ್ನು ನಿರಂತರ ಪ್ರೀತಿಸು.
ಹೀಗೆ ಕೊನೆಗಾಲದಲ್ಲಿ ದೇಹ ತ್ಯಾಗ ಮಾಡುವಾಗ ಭಗವಂತನ ಧ್ಯಾನ ಹೇಗೆ ಮಾಡಬೇಕು ಎನ್ನುವ ಚಿತ್ರಣವನ್ನು ನಮ್ಮ ಮುಂದಿರಿಸಿದ ಕೃಷ್ಣ, ದೇಹದಿಂದ ಹೊರ ಬಂದ ಮೇಲೆ ಭಗವಂತನತ್ತ ಪ್ರಯಾಣಿಸುವ ದಾರಿಯ ಬಗ್ಗೆ ಈ ಅಧ್ಯಾಯದ ಮುಂದಿನ ಭಾಗದಲ್ಲಿ ವಿವರಿಸುತ್ತಾನೆ.
