ಆಲೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ, ಸೇವಾ ಮನೋಭಾವ, ಸಹೋದರತೆಯನ್ನು ವೃದ್ಧಿಸುತ್ತದೆ ಎಂದು ಎಸ್ ವಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಬಿ.ಜಿ. ಗಿರೀಶ್ ಅಭಿಪ್ರಾಯ ಪಟ್ಟರು.
ಅವರು ಆಲೂರು ತಾಲೂಕು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಬೈರಾಪುರದ ಎಸ್ ವಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಸಾಮಾಜಿಕ ಮೌಲ್ಯಗಳು, ಸಾಂಸ್ಕೃತಿಕ ಮೌಲ್ಯಗಳು, ನೈತಿಕ ಮೌಲ್ಯಗಳು ಬೆಳೆಯಲು ಸಾಧ್ಯ ಈ ನಿಟ್ಟಿನಲ್ಲಿ ಸ್ಕೌಟ್ಸ್ ಗೈಡ್ ಚಳುವಳಿ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಮೂಡಿಸುವ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿ ಈ ಮುಖೇನ ಸೈನಿಕರ ಮಹತ್ವವನ್ನು ಅವರು ದೇಶಕ್ಕಾಗಿ ಹೋರಾಡುವ ಪರಿಯನ್ನು ಮಕ್ಕಳಿಗೆ ಅರ್ಥ ಮಾಡಿಸಿ ಕೊಡಲಾಗುತ್ತದೆ. ಮಕ್ಕಳು ಸ್ಕೌಟ್ಸ್ ಗೈಡ್ಸ್ ಸಮವಸ್ತ್ರ ಧರಿಸಿದ ಪುಟಾಣಿ ಯೋಧರಿದ್ದಂತೆ ಇವರನ್ನು ನಮ್ಮ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತಾರೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಕೊಟ್ಟಿದ್ದೇನೆ ಎನ್ನುವುದು ಮುಖ್ಯ. ಸ್ಕೌಟ್ಸ್ ಗೈಡ್ಸ್ ಇಂಗ್ಲೆಂಡಿನ ಒಬ್ಬ ನಿವೃತ್ತ ಯೋಧ ಸ್ಥಾಪಿಸಿದಂತ ಸಂಸ್ಥೆ. ಮಕ್ಕಳಲ್ಲಿ ಶಿಸ್ತು, ಸಂಯಮ, ರಾಷ್ಟ್ರಭಕ್ತಿ, ದೇಶಪ್ರೇಮ, ಸೇವಾ ಮನೋಭಾವ ಮುಂತಾದ ಮಹೋನ್ನತ ಗುಣಗಳನ್ನು ಬೆಳೆಸುವ ಹಿನ್ನೆಲೆಯಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ದಳ ಹಂತದಿಂದ, ತಾಲೂಕು ಹಂತ, ಜಿಲ್ಲಾ ಹಂತ, ರಾಜ್ಯ ಅಂತ ಹಾಗೂ ರಾಷ್ಟ್ರ ಹಂತದಲ್ಲಿಯೂ ಆಚರಿಸಲಾಗುತ್ತದೆ. ಈ ಮುಖೇನಾ ದೇಶಕ್ಕಾಗಿ ನಮ್ಮ ಯೋಧರು ಮಾಡಿದ ತ್ಯಾಗವನ್ನು, ಬಲಿದಾನವನ್ನು ಸ್ಮರಣೆ ಮಾಡಿಕೊಳ್ಳುತ್ತಾ ದೇಶ ಅಭಿಮಾನವನ್ನು ಬೆಳೆಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಮುಖ್ಯ ಶಿಕ್ಷಕಿ ನಳಿನ ಗಿರೀಶ್ ಪ್ರಾಸ್ತವಿಕವಾಗಿ ಮಾತನಾಡಿ ಭಾರತದಲ್ಲಿ ಕಾರ್ಗಿಲ್ ಯುದ್ಧ ಒಂದು ಮೈಲುಗಲ್ಲು. ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದ ಮಹತ್ತರ ಕದನ. 1999ರ ಮೇ-ಜೂಲೈನಲ್ಲಿ ಲಡಾಖ್ನ ಕಾರ್ಗಿಲ್ ವಲಯದಲ್ಲಿ ನಡೆದ 60 ದಿನಗಳಿಗೂ ಅಧಿಕ ಕಾಲದ ಕದನದಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನಿ ನುಸುಳುಕೋರರನ್ನು ಹಿಮ್ಮೆಟ್ಟಿಸಿದರು. ಜುಲೈ 26, 1999 ರಂದು ಭಾರತೀಯ ಸೇನೆಯು ಶತ್ರುಗಳಿಂದ ನಮ್ಮ ಪರ್ವತ ಶಿಖರಗಳನ್ನು ಮರಳಿ ವಶಪಡಿಸಿಕೊಂಡು “ಆಪರೇಷನ್ ವಿಜಯ್” ಯಶಸ್ವಿಯಾಗಿದೆ ಎಂದು ಘೋಷಿಸಿತು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಧೀರ ಯೋಧರ ಗೌರವಾರ್ಥವಾಗಿ ಈ ದಿನದಂದು ದೇಶಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ನವದೆಹಲಿಯಲ್ಲಿರುವ ಯುದ್ಧ ಸ್ಮಾರಕಗಳಲ್ಲಿ ಪ್ರಧಾನ ಮಂತ್ರಿಗಳು ಮತ್ತು ಸೇನಾ ಮುಖ್ಯಸ್ಥರು ವೀರ ಯೋಧರಿಗೆ ಪುಷ್ಪನಮನ ಸಲ್ಲಿಸುತ್ತಾರೆ. ವಿವಿಧ ರಕ್ಷಣಾ ಕ್ಷೇತ್ರಗಳು, ಶಾಲೆಗಳು ಮತ್ತು ಸಂಘ ಸಂಸ್ಥೆಗಳು ಸೈನಿಕರ ಶೌರ್ಯವನ್ನು ಸ್ಮರಿಸಿ ನಾನಾ ದೇಶಭಕ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಭಾರತೀಯ ಸೇನೆಯ ಯೋಧ ರಾಜೇಶ್ ಬಿ. ಸಿ. ಹಾಗೂ ನಿವೃತ್ತ ಯೋಧ ನಾಗೇಶ್ ಎಚ್. ಎಚ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಸುನಿಲ್, ಭಾರತೀಯ ಸೇನೆಯ ಹಾಲಿ ಯೋಧ ರಾಜೇಶ್ ಬಿ. ಸಿ. ಹಾಗೂ ನಿವೃತ್ತ ಯೋಧ ನಾಗೇಶ್ ಎಚ್. ಎಚ್, ಶಾಲಾ ಸ್ಟಿಎಂಸಿಯ ವಿವೇಕ್ ಹಾಗೂ ರಾಮಚಂದ್ರ, ಪತ್ರಕರ್ತ ಧರಣಿ, ಲೇಡಿ ಸ್ಕೌಟ್ ಮಾಸ್ಟರ್ ನವ್ಯಶ್ರೀ ಅವರುಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಳೆದ ವಾರ ಸ್ಥಳೀಯ ಸಂಸ್ಥೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಸ್ಕೌಟ್ ಮಾಸ್ಟರ್ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಲೇಡಿ ಸ್ಕೌಟ್ ಮಾಸ್ಟರ್ ಹರ್ಷಿತ ಸ್ವಾಗತಿಸಿದರು, ರಾಜ್ಯ ಪುರಸ್ಕಾರ ಗೈಡ್ ಚಲನ ಗಿರೀಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಬ್ ಮಾಸ್ಟರ್ ದೇವರಾಜ್, ಲೇಡಿ ಸ್ಕೌಟ್ ಮಾಸ್ಟರ್ ರೋಜ್ ಮೇರಿ, ಕ್ಯಾಪ್ಟನ್ ಸುಮಿತ್ರ, ಚೈತ್ರ, ರಂಜಿತ ಸೇರಿದಂತೆ ನೂರಕ್ಕೂ ಹೆಚ್ಚು ಸ್ಕೌಟ್ಸ್ ಗೇಟ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Good program conducted by
SV PUBLIC SCHOOL BYRAPURA