ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಭುವನಹಳ್ಳಿ ಗ್ರಾಮದಲ್ಲಿ ನಡೆಯುವ ಮೂರೂರಮ್ಮ ಜಾತ್ರೆ ಗ್ರಾಮೀಣ ಸಂಸ್ಕೃತಿ, ಭಕ್ತಿ ಮತ್ತು ಜನಪದ ಪರಂಪರೆಯ ಅನನ್ಯ ಸಂಗಮವಾಗಿದೆ. ಈ ಬಾರಿ ಜಾತ್ರೆಯಲ್ಲಿ ಭಾಗವಹಿಸಿದ ಅನುಭವ ಮನಸ್ಸಿಗೆ ವಿಶೇಷ ಸಂತಸ ನೀಡಿತು.
ನನ್ನ ಅಕ್ಕ ಕಾಂತಾಮಣಿಯವರ ಇಬ್ಬರು ಪುತ್ರಿಯರಾದ ಗೀತಾ ಮತ್ತು ಶ್ವೇತಾ ಭುವನಹಳ್ಳಿಗೆ ವಿವಾಹವಾಗಿರುವ ಕಾರಣ, ಅವರ ಆಹ್ವಾನದ ಮೇರೆಗೆ ನಾನು, ನನ್ನ ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಜಾತ್ರೆಗೆ ತೆರಳಿದೆವು. ಕುಶಾಲನಗರದಿಂದ ಪಿರಿಯಾಪಟ್ಟಣಕ್ಕೆ ಬಂದು ಅಲ್ಲಿಂದ ಭುವನಹಳ್ಳಿ ಬಸ್ಸಿನಲ್ಲಿ ಪ್ರಯಾಣಿಸಿ ಗ್ರಾಮ ತಲುಪಿದೆವು. ಜಾತ್ರೆಯ ಪ್ರಮುಖ ಕಾರ್ಯಕ್ರಮಗಳಾದ ಕೆಂಡೋತ್ಸವ ಮತ್ತು ರಥೋತ್ಸವಕ್ಕೆ ಸಕಲ ಸಿದ್ಧತೆಗಳು ಆಗಲೇ ಪೂರ್ಣಗೊಂಡಿದ್ದವು.
ಮೂರೂರಮ್ಮ ಹೆಸರಿನ ಹಿಂದಿನ ಕಥೆ
“ಮೂರೂರಮ್ಮ” ಎಂಬ ಹೆಸರಿನ ಬಗ್ಗೆ ಕುತೂಹಲ ಮೂಡಿದಾಗ ಗ್ರಾಮದ ಗಣೇಶ್ ಮಾಹಿತಿ ನೀಡಿದರು. ಸುಮಾರು ಮೂವತ್ತು ವರ್ಷಗಳ ಹಿಂದೆ ಭುವನಹಳ್ಳಿ, ಜೋಗನಹಳ್ಳಿ ಹಾಗೂ ಬೆಕ್ರೆ ಗ್ರಾಮಗಳ ಜನರು ಒಟ್ಟಾಗಿ ಈ ಜಾತ್ರೆಯನ್ನು ಆಚರಿಸುತ್ತಿದ್ದರು. ಮೂರು ಊರುಗಳ ಒಗ್ಗಟ್ಟಿನ ಸಂಕೇತವಾಗಿ ದೇವತೆಗೆ “ಮೂರೂರಮ್ಮ” ಎಂಬ ಹೆಸರು ಬಂದಿದೆ. ಈಗ ಮೂರು ಗ್ರಾಮಗಳೂ ಪ್ರತ್ಯೇಕವಾಗಿ ಜಾತ್ರೆ ಆಚರಿಸುತ್ತಿದ್ದರೂ, ಆ ಹೆಸರಿನಲ್ಲಿರುವ ಐತಿಹಾಸಿಕ ನೆನಪು ಇನ್ನೂ ಜೀವಂತವಾಗಿದೆ.

ರಥೋತ್ಸವದ ಸಂಭ್ರಮ
ಜಾತ್ರೆಯ ದಿನ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ನೆಂಟರು, ಬಂಧುಗಳು ಮತ್ತು ಭಕ್ತರು ಕಾರು, ಬೈಕ್ ಹಾಗೂ ಬಸ್ಸುಗಳಲ್ಲಿ ಆಗಮಿಸುತ್ತಿದ್ದರು. ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಮೂರೂರಮ್ಮ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಿಯನ್ನು ದೇಗುಲದಿಂದ ಹೊರತಂದು ರಥದ ಸುತ್ತ ಪ್ರದಕ್ಷಿಣೆ ಮಾಡಿಸಿ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.

ಗ್ರಾಮದ ಮಹಿಳೆಯರು ರಾಗಿ ಸವಿಗೆ, ಅಕ್ಕಿ ಸವಿಗೆ, ಅನ್ನ-ಸಾರು ಹಾಗೂ ಸಿಹಿ ತಿಂಡಿಗಳನ್ನು ಸಾಂಪ್ರದಾಯಿಕವಾಗಿ ಹೊತ್ತು ತಂದು ದೇವಿಗೆ ಸಮರ್ಪಿಸಿದರು. ಬೆಳಿಗ್ಗೆಯೇ ಬೆಕ್ರೆಯ ದೊಡ್ಡ ಕೆರೆಯಲ್ಲಿ ಪೂಜೆ ಸಲ್ಲಿಸಿ ರಥಕ್ಕೆ ಕಳಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಹೂವು, ಧ್ವಜ ಹಾಗೂ ಬಟ್ಟೆಗಳಿಂದ ರಥವನ್ನು ಅಲಂಕರಿಸಲಾಗಿತ್ತು.

ಸಂಪ್ರದಾಯಗಳ ವೈಶಿಷ್ಟ್ಯ
ಆ ವರ್ಷ ಮದುವೆಯಾದ ಗ್ರಾಮದ ಮೂವರು ಹೆಣ್ಣುಮಕ್ಕಳು ಚೌರಿಯಿಂದ ನೀರು ತಂದು ರಥದ ಚಕ್ರಗಳನ್ನು ತೊಳೆದು ಪೂಜಿಸುವುದು ಇಲ್ಲಿನ ವಿಶಿಷ್ಟ ಸಂಪ್ರದಾಯ. ರಥವನ್ನು ಎಳೆಯಲು ಯುವಕರು ಅಪಾರ ಉತ್ಸಾಹ ತೋರಿದರು. ರಥ ಸುರಕ್ಷಿತವಾಗಿ ಸಾಗಲೆಂದು ವಿಶೇಷ ಪೂಜೆ ನೆರವೇರಿಸಲಾಯಿತು.
ಗ್ರಾಮದ ಜೈನ ಬಸದಿ ಹಾಗೂ ಬನಶಂಕರಿ ದೇವಸ್ಥಾನಗಳೂ ಈ ಪ್ರದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ.

ಕೆಂಡೋತ್ಸವ ಮತ್ತು ಮಳೆ
ರಥೋತ್ಸವ ಮಂಗಳ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತೇರಿನ ಮುಂದೆ ಯುವಕರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೂರೂರಮ್ಮ ಸರ್ಕಾರಿ ಪ್ರೌಢಶಾಲೆಯ ಪಕ್ಕದ ವಿಶಾಲ ಮೈದಾನದಲ್ಲಿ ಕೆಂಡೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಭಕ್ತರು ಕೆಂಡ ಹಾಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು.
ತೇರು ಕೆಂಡೋತ್ಸವ ನಡೆಯುವ ಸ್ಥಳದ ಬಳಿ ತಲುಪುತ್ತಿದ್ದಂತೆ ಆಕಾಶದಲ್ಲಿ ಮೋಡಗಳು ಕವಿದು ಮಳೆ ಸುರಿಯತೊಡಗಿತು. ಪ್ರಕೃತಿಯೂ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡಂತಾಗಿದ್ದು, ಭಕ್ತರಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿತು.

ಸಂಸ್ಕೃತಿ ಉಳಿಸುವ ಜಾತ್ರೆಗಳು
ಮೂರೂರಮ್ಮ ಜಾತ್ರೆಯಂತಹ ಗ್ರಾಮೀಣ ಉತ್ಸವಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ; ಅವು ಜನರ ಒಗ್ಗಟ್ಟು, ಪರಸ್ಪರ ಬಾಂಧವ್ಯ ಹಾಗೂ ಶತಮಾನಗಳ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಸಾಂಸ್ಕೃತಿಕ ವೇದಿಕೆಗಳಾಗಿವೆ. ಗ್ರಾಮೀಣ ಬದುಕಿನ ಸರಳತೆ, ಭಕ್ತಿ ಮತ್ತು ಹಬ್ಬದ ಸಂಭ್ರಮವನ್ನು ಈ ಜಾತ್ರೆ ಜೀವಂತವಾಗಿ ಪ್ರತಿಬಿಂಬಿಸುತ್ತದೆ.
– ಗೊರೂರು ಅನಂತರಾಜು, ಹಾಸನ
ಮೊ: 94494 62879
ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,
3ನೇ ಕ್ರಾಸ್, ಹಾಸನ – 573201.
