ಬೆಳಗಾವಿ, ನ. 2: ಉತ್ತರಾಖಂಡ್ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಳುಂಕೆ ಅವರ ಪಾರ್ಥಿವ ಶರೀರವು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸ್ವಗ್ರಾಮ ಅರಟಾಳಕ್ಕೆ ತಲುಪಿದೆ.
ಗ್ರಾಮಕ್ಕೆ ಮೃತದೇಹ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪತಿಯ ಪಾರ್ಥಿವ ಶರೀರ ಕಂಡು ಪತ್ನಿ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಂದೆಯ ಫೋಟೋವನ್ನು ಕಂಡು ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ದುಃಖದ ನಡುವೆಯೂ ತಾಯಿಯನ್ನು ಸಂತೈಸಲು ಪ್ರಯತ್ನಿಸಿದ ಆಕೆಯ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.
ಅರುಣ್ ಸಾಳುಂಕೆ ಅವರ ಅಂತಿಮ ದರ್ಶನ ಪಡೆಯಲು ಗ್ರಾಮಸ್ಥರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಆಗಮಿಸಿ ಗೌರವ ಸಲ್ಲಿಸಿದರು. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿತ್ತು.
