ಚಾಮರಾಜನಗರ: ರೋಟರಿ ಸಂಸ್ಥೆ ಹಾಗೂ ಜೋಳಿಗೆ ಪ್ರಕಾಶನ ಚಾಮರಾಜನಗರ ಇವರ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಉದಯೋನ್ಮುಖ ಕವಿ ಪ್ರಕಾಶ್ ಪುಟ್ಟಪ್ಪ ರವರಿಗೆ ಸನ್ಮಾನ ಮತ್ತು ದೀಪಾವಳಿ ಕವಿಗೋಷ್ಠಿ-2026 ಕಾರ್ಯಕ್ರಮವನ್ನು ರೋಟರಿ ಭವನದಲ್ಲಿ ಆಯೋಜಿಸಲಾಯಿತು.
ದೀಪಾವಳಿ ಎಂದರೆ ಕೇವಲ ಹಣತೆ ಬೆಳಗಿಸುವ ಹಬ್ಬವಲ್ಲ. ಮನಸ್ಸಿನ ಕತ್ತಲೆಯನ್ನು ಕಳೆಯುವ ಹಬ್ಬ. ಅಂತಹ ಬೆಳಕಿನ ಹಬ್ಬದಲ್ಲಿ ಕಾವ್ಯದ ಬೆಳಕು ಚೆಲ್ಲಿದ ಈ ಕಾರ್ಯಕ್ರಮ ಸಾಹಿತ್ಯ ಪ್ರೇಮಿಗಳ ಮನಸ್ಸಿನಲ್ಲಿ ದೀಪದಂತೆ ಉಳಿಯಿತು.
ಪ್ರಾಸ್ತಾವಿಕ ನುಡಿಯಲ್ಲಿ ಹಿರಿಯ ಸಾಹಿತಿ ಮಂಜು ಕೋಡಿಯುಗನೆ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕವಿಗಳನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ಆಶಯದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಅನೇಕ ಯುವ ಕವಿಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಅವರಿಗೆ ಸೂಕ್ತ ವೇದಿಕೆ ಹಾಗೂ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕವಿತಾ ವಾಚನ, ಕವಿಗೋಷ್ಠಿ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಉದಯೋನ್ಮುಖ ಕವಿಗಳ ಪ್ರತಿಭೆಯನ್ನು ಹೊರತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಈ ಬಾರಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವ ಕವಿಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿಯೂ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಮಹದೇವ ಶಂಕನಪುರ ಕಾವ್ಯವು ಜಾತಿ, ಮತ, ಧರ್ಮ ಹಾಗೂ ಸಿದ್ಧಾಂತಗಳ ಬಂಧನದಿಂದ ಮುಕ್ತವಾಗಿರಬೇಕು. ಕವಿತೆ ಕೇವಲ ಪದಗಳ ಜೋಡಣೆಯಲ್ಲ; ಅದು ಬದುಕಿನ ಅನುಭವ, ನೋವು, ಸಂವೇದನೆ ಮತ್ತು ಸಮಾಜದ ವಾಸ್ತವಿಕತೆಯನ್ನು ಅಭಿವ್ಯಕ್ತಿಸುವ ಶಕ್ತಿಯಾಗಿದೆ ಎಂದರು.
ಇಂದಿನ ಕಾವ್ಯವು ನವೋದಯ, ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯದ ಅನುಭವಗಳನ್ನು ಒಳಗೊಂಡು ಅವುಗಳನ್ನು ಮೀರಿ ಹೊಸ ಅಭಿವ್ಯಕ್ತಿಯ ದಾರಿಯಲ್ಲಿ ಸಾಗುತ್ತಿದೆ. ಕಾವ್ಯ ಕಾಲಾತೀತವಾಗಿ, ದೇಶಾತೀತವಾಗಿ ಹಾಗೂ ವರ್ತಮಾನದ ವಿದ್ಯಮಾನಗಳಿಗೆ ಸ್ಪಂದಿಸುವಂತಿರಬೇಕು. ಅಂತಹ ಕಾವ್ಯ ಮಾತ್ರ ಸಾರ್ವಕಾಲಿಕ ಮೌಲ್ಯವನ್ನು ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.
ಕವಿತೆ ಒಂದು ನಶೆಯಿದ್ದಂತೆ. ಮನುಷ್ಯ ಸದಾ ಸಾಹಿತ್ಯ ಮತ್ತು ಕಾವ್ಯದ ಒಡನಾಟದಲ್ಲಿರಬೇಕು. ಪ್ರತಿಮೆಗಳು, ರೂಪಕಗಳು ಹಾಗೂ ಸಂಕೇತಗಳ ಮೂಲಕ ಆಳವಾದ ವಿಚಾರಗಳನ್ನು ಅಭಿವ್ಯಕ್ತಿಸುವುದೇ ನಿಜವಾದ ಕಾವ್ಯದ ಶಕ್ತಿ. ಕವಿ ಸಮಾಜದ ಕಣ್ಣು, ಕಿವಿ, ಹೃದಯ ಇದ್ದಂತೆ. ಅವನು ನೋಡಿದ್ದನ್ನು, ಅನುಭವಿಸಿದ್ದನ್ನು ಕಾವ್ಯವಾಗಿ ಕಟ್ಟಿಕೊಡಬೇಕು ಎಂದು ನುಡಿದರು
ಪ್ರಕಾಶ್ ಪುಟ್ಟಪ್ಪ ಅವರ ಕವಿತೆಗಳಲ್ಲಿ ಹಳ್ಳಿಯ ಮಣ್ಣಿನ ವಾಸನೆ ಇದೆ, ಬದುಕಿನ ನೋವಿದೆ, ಪ್ರೀತಿಯಿದೆ, ಹೋರಾಟವಿದೆ. ಅವರು ಬರೆಯುವುದು ಕೇವಲ ಕವಿತೆಯಲ್ಲ, ಅದು ಜನರ ಬದುಕಿನ ದನಿ. ಸಾಮಾನ್ಯ ಮನುಷ್ಯನ ಕಷ್ಟ, ರೈತನ ಬೆವರು, ತಾಯಿಯ ಮಮತೆ, ಪ್ರಕೃತಿಯ ಸೌಂದರ್ಯ, ಅನ್ಯಾಯದ ವಿರುದ್ಧದ ಸಿಡಿಮಿಡಿ – ಎಲ್ಲವೂ ಅವರ ಕವಿತೆಯಲ್ಲಿ ಜೀವಂತವಾಗಿ ಬರುತ್ತದೆ. ಅದಕ್ಕಾಗಿಯೇ ಅವರ ಕವಿತೆಗೆ ರಾಜ್ಯಮಟ್ಟದ ಪ್ರಜಾವಾಣಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಇದು ಅವರ ವೈಯಕ್ತಿಕ ಗೆಲುವಲ್ಲ, ಇದು ಇಡೀ ಚಾಮರಾಜನಗರ ಜಿಲ್ಲೆಯ ಸಾಹಿತ್ಯಕ್ಕೆ ಸಿಕ್ಕ ಗೌರವ. ಅವರ ಕಾವ್ಯ ಯುವ ಕವಿಗಳಿಗೆ ಸ್ಫೂರ್ತಿ, ಮಾರ್ಗದರ್ಶನ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹೊರೆಯಾಲ ದೊರೆಸ್ವಾಮಿ ಮಾತನಾಡಿ ದೀಪಾವಳಿ ಎಂದರೆ ಬೆಳಕಿನ ಹಬ್ಬ. ಕವಿತೆಯೂ ಕೂಡ ಬೆಳಕೇ. ಕತ್ತಲಲ್ಲಿರುವ ಮನಸ್ಸಿಗೆ ಬೆಳಕು ಕೊಡುವುದು ಕವಿತೆ. ಕವಿತೆ ಇಲ್ಲದ ಬದುಕು ಹಣತೆ ಇಲ್ಲದ ದೀಪಾವಳಿ ಇದ್ದಂತೆ. ಇಂತಹ ಕವಿಗೋಷ್ಠಿಗಳು ಯುವ ಕವಿಗಳಿಗೆ ದಾರಿದೀಪವಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಸಾಹಿತ್ಯದ ಪರಂಪರೆ ದೊಡ್ಡದು. ಆ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅವರ ಕಾವ್ಯ ಇನ್ನಷ್ಟು ಜನರ ಹೃದಯ ತಟ್ಟಲಿ, ಅವರ ಕಾವ್ಯದ ಬೆಳಕು ಇಡೀ ಕನ್ನಡ ನಾಡಿಗೆ ಹರಡಲಿ ಎಂದು ಹಾರೈಸಿದರು.
ಪ್ರಜಾವಾಣಿ ದೀಪಾವಳಿಕವನ ಸ್ಪರ್ಧೆ-2026 ರಲ್ಲಿ ಪ್ರಥಮ ಬಹುಮಾನ ಗಳಿಸಿದ ಕವಿ ಪ್ರಕಾಶ್ ಪುಟ್ಟಪ್ಪ ಅವರಿಗೆ ರೋಟರಿ ಸಂಸ್ಥೆಯ ಅಧ್ಯಕ್ಷ ಶ್ರೀ ಅಬ್ದುಲ್ ಅಜೀಜ್ ದೀನಾ ಅವರು ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಕವಿ ಪ್ರಕಾಶ್ ಪುಟ್ಟಪ್ಪ ತಮ್ಮ ಕಾವ್ಯ ಪಯಣಕ್ಕೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆ ತಿಳಿಸಿ ತಮ್ಮ ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಕವಿಗಳಾದ ದಾಸನೂರು ಕುಸಣ್ಣ, ಸೋಮಶೇಖರ ಬಿಸಲ್ವಾಡಿ, ಶೀಲಾ ಸತ್ಯೇಂದ್ರಸ್ವಾಮಿ, ಅಸಿಮ, ಬಸವಣ್ಣ ಮೂಕಹಳ್ಳಿ, ಡಾ. ಅಶ್ವಿನಿ ಕಸ್ಪ, ಶಿವು ಜನ್ನೂರು ಹೊಸೂರು ಸೇರಿದಂತೆ ಅನೇಕ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು. ಪ್ರೀತಿ, ಬದುಕು, ರೈತ, ಪ್ರಕೃತಿ, ಸಮಾಜ, ಮೌಲ್ಯಗಳ ಕುರಿತ ಪ್ರತಿಯೊಂದು ಕವಿತೆಯೂ ಸಭಿಕರ ಮನಸ್ಸು ಗೆದ್ದು, ಮತ್ತೆ ಮತ್ತೆ ಚಪ್ಪಾಳೆ ಗಿಟ್ಟಿಸಿಕೊಂಡಿತು. ಕವಿಗೋಷ್ಠಿ ನಿಜಕ್ಕೂ ಕಾವ್ಯದ ಹಬ್ಬವಾಗಿ ಮಾರ್ಪಟ್ಟಿತು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ, ನಾಗಮಲ್ಲಪ್ಪ,ಮಹಾಲಿಂಗ ಗಿರ್ಗಿ , ರೇಚಂಬಳ್ಳಿ ದುಂಡು ಮಾದಯ್ಯ, ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಡಾ. ಕುಮಾರ್ ಚಿಕ್ಕಹೊಳೆ, ನಂಜುಂಡಸ್ವಾಮಿ ಪಾಪು, ಮಿಮಿಕ್ರಿ ಮಲ್ಲಣ್ಣ, ಸಿಎಂ ಕೃಷ್ಣಮೂರ್ತಿ, ಡಾ. ಬಿಆರ್ ಕೃಷ್ಣಕುಮಾರ್,ನೋಟರಿ ನಾಗಣ್ಣ , ಬ್ರಹ್ಮೇಶ್, ರಮೇಶ್ ದಡದಹಳ್ಳಿ,ಕನ್ನಡ ಸಾಹಿತ್ಯಾಭಿಮಾನಿಗಳು, ಉದಯೋನ್ಮುಖ ಕವಿಗಳು ಹಾಗೂ ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
-ಶ್ರೀಸಾಯಿ ಎಸ್ ಮಂಜು
