ರಾಮನಾಥಪುರ: ಆಸ್ತಮಾ ಮುಕ್ತ ಭಾರತದ ಆಶಯದೊಂದಿಗೆ ಆಸ್ತಮಾ ಹಾಗೂ ಉಸಿರಾಟದ ಸಮಸ್ಯೆಗಳಿಗೆ ಉಚಿತ ಆಯುರ್ವೇದ ಔಷಧ ವಿತರಿಸುವ ಶ್ವಾಸ ಕಾಸ ಮುಕ್ತಿ ಅಭಿಯಾನವನ್ನು 2026ನೇ ಸಾಲಿನಲ್ಲಿಯೂ ಹಮ್ಮಿಕೊಳ್ಳಲಾಗಿದೆ ಎಂದು ಆಯುರ್ವೇದ ತಜ್ಞ ಡಾ. ಎ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.
ರಾಮನಾಥಪುರ ಹೋಬಳಿ ಬಸವಾಪಟ್ಟಣ ಗ್ರಾಮದ ದಿವಂಗತ ಎ.ಜಿ. ಸುಬ್ಬರಾವ್ ಅವರ ಪುತ್ರರಾದ ಡಾ. ಎ.ಎಸ್. ಚಂದ್ರಶೇಖರ್ ಅವರು, ಆಯುರ್ವೇದ ಕ್ಷೇತ್ರದಲ್ಲಿ 50 ವರ್ಷಗಳ ಅನುಭವ ಹೊಂದಿದ್ದು, ಕಳೆದ 28 ವರ್ಷಗಳಿಂದ ಆಸ್ತಮಾ ಮತ್ತು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಉಚಿತ ಔಷಧ ವಿತರಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
2026ನೇ ಸಾಲಿನ ಅಭಿಯಾನದಡಿ ವಿತರಿಸಲಾಗುವ ಔಷಧಿಯನ್ನು ಮಾರ್ಗಶಿರ ಪೂರ್ಣಿಮೆಯಾದ ಡಿಸೆಂಬರ್ 24ರಂದು ವರ್ಷಕ್ಕೆ ಒಂದು ಬಾರಿ ಮಾತ್ರ ಸೇವಿಸುವಂತೆ ತಿಳಿಸಲಾಗಿದೆ. ಈ ಅಭಿಯಾನದ ಉದ್ದೇಶ ಆಸ್ತಮಾ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ಅರಿವು ಮೂಡಿಸುವುದು ಮತ್ತು ಉಚಿತ ಆಯುರ್ವೇದ ಔಷಧ ವಿತರಿಸುವುದಾಗಿದೆ.
ಔಷಧಿಗಾಗಿ ನೋಂದಾಯಿಸಿಕೊಳ್ಳಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ. ನೋಂದಾಯಿಸಿಕೊಂಡವರಿಗೆ ಭಾರತೀಯ ಅಂಚೆ ಇಲಾಖೆಯ ಕ್ಯಾಶ್ ಆನ್ ಡೆಲಿವರಿ (COD) ಸೇವೆಯ ಮೂಲಕ ಔಷಧ ಕಳುಹಿಸಲಾಗುತ್ತದೆ. ಅಂಚೆ ಶುಲ್ಕವನ್ನು ಅಂಚೆ ವಿತರಕರಿಗೆ ಪಾವತಿಸಿ ಔಷಧ ಪಡೆಯಬಹುದಾಗಿದೆ. ಪ್ರತಿ ರೋಗಿಯೂ ಒಂದೇ ಬಾರಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಅಭಿಯಾನವು ಪ್ರಸ್ತುತ ನಡೆಯುತ್ತಿರುವ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
