ಚನ್ನರಾಯಪಟ್ಟಣ, ಆ.4: ತೆರಿಗೆ ವಸೂಲಾತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿ, ರಾಜ್ಯದ ಎಲ್ಲಾ ತಾಲೂಕು ಪಂಚಾಯಿತಿಗಳ ಪೈಕಿ ಶೇ. 58.68ರಷ್ಟು ಕಂದಾಯ ವಸೂಲಾತಿ ಮಾಡಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.
ತಾಲೂಕಿನ ಬಾಗೂರು ಗ್ರಾಮ ಪಂಚಾಯಿತಿ ಶೇ. 86.60ರಷ್ಟು ತೆರಿಗೆ ವಸೂಲಾತಿ ಮಾಡುವ ಮೂಲಕ ‘ಸ್ಟಾರ್ ಪಂಚಾಯಿತಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಿಲ್ಲೆಯ ಇತರ ತಾಲೂಕುಗಳ ಪೈಕಿ ಆಲೂರು ಶೇ. 47.78, ಹಾಸನ ಶೇ. 46.55 ಹಾಗೂ ಬೇಲೂರು ಶೇ. 45.79ರಷ್ಟು ತೆರಿಗೆ ವಸೂಲಾತಿ ಮಾಡಿ ಉತ್ತಮ ಸಾಧನೆ ದಾಖಲಿಸಿವೆ.
ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ Shubham Shukla, ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
ತೆರಿಗೆ ಸಂಗ್ರಹದಲ್ಲಿ ರಾಜ್ಯ ಮಟ್ಟದ ಈ ಸಾಧನೆಗೆ ತಾಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
– ಮಂಜುನಾಥ್ ಐ ಕೆ
