ಚನ್ನರಾಯಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನದಡಿ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 12 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸುವಲ್ಲಿ ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ವಿಫಲರಾಗಿದ್ದಾರೆ ಎಂದು ದಲಿತ ಮುಖಂಡ ಜಂಬೂರು ಶಿವಣ್ಣ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಆಯೋಜಿಸದೆ, ಉದಾಸೀನತೆ ತೋರುತ್ತಾ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿರುವ ಸಿ.ಎನ್. ಬಾಲಕೃಷ್ಣ ಅವರು ತಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕಿತ್ತು. ಆದರೆ, ಪ್ರತಿಮೆ ಉದ್ಘಾಟನೆಯ ದಿನಾಂಕ ಮುಂದೂಡಿಕೆಗೆ ಮಾಜಿ ಎಂಎಲ್ಸಿ ಕಾರಣ ಎಂದು ದಲಿತ ಮುಖಂಡರ ಮೂಲಕ ಆರೋಪ ಮಾಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆ ಲೋಕಾರ್ಪಣೆಗೊಳಿಸುವ ವಿಚಾರದಲ್ಲಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿತ್ತು. ಆದರೆ, ಕಾಟಾಚಾರಕ್ಕೆ ಮೂರು ಬಾರಿ ದಿನಾಂಕ ನಿಗದಿಪಡಿಸಿ, ಉದ್ಘಾಟನೆ ಮಾಡದೆ ಕಾಲಹರಣ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ತಾಲೂಕಿನ ಪ್ರಥಮ ಪ್ರಜೆಯಾದ ಶಾಸಕರು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿಮೆ ಉದ್ಘಾಟನೆಗೆ ವಿಶೇಷ ಆಸಕ್ತಿ ವಹಿಸಬೇಕಿತ್ತು. ಅದನ್ನು ಮಾಡದೆ ಪರಾಜಿತ ಅಭ್ಯರ್ಥಿಯ ಮೇಲೆ ಆರೋಪ ಹೊರಿಸುತ್ತಿರುವುದು ಸರಿಯಲ್ಲ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಹಾಲಿ ಶಾಸಕರ ಆದೇಶಕ್ಕಿಂತ ಪರಾಜಿತ ಅಭ್ಯರ್ಥಿ ಗೋಪಾಲಸ್ವಾಮಿ ಅವರ ಮಾತೇ ಅಂತಿಮವಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸೋತ ಅಭ್ಯರ್ಥಿಯ ಮೇಲೆ ಆರೋಪ ಹೊರಿಸುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದರು.
ಕೆಡಿಪಿ ಸದಸ್ಯ ದಡಿಗಟ್ಟ ಮಧು ಮಾತನಾಡಿ, ಇತ್ತೀಚಿನ ಪ್ರತಿಭಟನೆಯಲ್ಲಿ ದಲಿತ ಮುಖಂಡ ದಿಂಡಗೂರು ಗೋವಿಂದರಾಜು ಅವರು, “ನಿಮ್ಮ ಅಪ್ಪಂದಿರಿಗೆ ಹುಟ್ಟಿದವರು ಕೂಡಲೇ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ” ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಹೇಳಿಕೆ ನೀಡುವ ಮೊದಲು ತಮ್ಮ ಮಾತಿನ ಘನತೆಯನ್ನು ಅರಿತುಕೊಳ್ಳಬೇಕು. ದಲಿತ ಮುಖಂಡರನ್ನು ಅಸಂಬದ್ಧ ಪದಗಳಿಂದ ನಿಂದಿಸಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರನ್ನು ನೇರವಾಗಿ ಭೇಟಿ ಮಾಡಿದರೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕುಟುಂಬದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭಯದಿಂದ ಶಾಸಕರು ತಮ್ಮ ಪಕ್ಷದ ಮುಖಂಡರನ್ನು ಮಾತ್ರ ಸಚಿವರ ಭೇಟಿಗೆ ಕಳುಹಿಸಿದ್ದಾರೆ. ತಾವೇ ಸಚಿವರನ್ನು ಭೇಟಿ ಮಾಡಿ ಚರ್ಚಿಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರತಿಮೆ ಲೋಕಾರ್ಪಣೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಇದೀಗ ಪ್ರತಿಮೆ ಲೋಕಾರ್ಪಣೆ ವಿಚಾರದಲ್ಲಿ ರಾಜಕೀಯ ಉದ್ದೇಶದಿಂದ ಕೆಲವು ದಲಿತ ಮುಖಂಡರನ್ನು ಪ್ರಚೋದಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಜಂಬೂರು ಶಿವಣ್ಣ ದೂರಿದರು.
ಜಿ. ಪರಮೇಶ್ವರ್ ಸಂಘದ ಅಧ್ಯಕ್ಷ ಹಿರಿಸೇವೆ ಮಂಜುನಾಥ್ ಮಾತನಾಡಿ, ದಲಿತ ಮುಖಂಡ ದಿಂಡಗೂರು ಗೋವಿಂದರಾಜು ಅವರು ದಲಿತ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿರುವುದು ನೋವು ತಂದಿದೆ. ಪ್ರತಿಮೆ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಶಾಸಕರ ನಡೆಯನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಅಧಿವೇಶನ ಮುಗಿದ ತಕ್ಷಣ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆಗೆ ದಿನಾಂಕ ನಿಗದಿಪಡಿಸಿ, ಅದ್ದೂರಿಯಾಗಿ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೂ ಏಕಾಏಕಿ ಪ್ರತಿಭಟನೆ ನಡೆಸುತ್ತಿರುವುದು ವಿಷಾದನೀಯ. ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ದಲಿತ ಸಮಾಜದ ಎಲ್ಲಾ ಸಚಿವರನ್ನು ಕರೆತರುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಜಂಬೂರು ಶಿವಣ್ಣ, ತಾಲೂಕು ಭೂ ನ್ಯಾಯ ಮಂಡಳಿಯ ಮಾಜಿ ನಿರ್ದೇಶಕ ಮತ್ತಿಘಟ್ಟ ರಂಗಸ್ವಾಮಿ, ಕೆಡಿಪಿ ಸದಸ್ಯರಾದ ದಡಿಗಟ್ಟ ಮಧು ಹಾಗೂ ಕಬ್ಬಾಳು ಮಹೇಶ್, ಆರೋಗ್ಯ ರಕ್ಷಾ ಸಮಿತಿಯ ನಿರ್ದೇಶಕ ನಾಗಸಮುದ್ರ ಬಾಲು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಾಣೆನಹಳ್ಳಿ ಮಧುಕುಮಾರ್, ನುಗೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎನ್.ಜಿ. ಕಿರಣ್, ದಲಿತ ಮುಖಂಡರಾದ ಜಂಬೂರು ಜಗದೀಶ್, ಎಂ.ಆರ್. ರಂಗಸ್ವಾಮಿ, ಎಸ್.ಎಲ್. ದೊರೆರಾಜು, ಹಿರಿಸೇವೆ ಮಂಜು, ನೇರಲಕೆರೆ ಎನ್.ಎಂ. ಪ್ರವೀಣ್, ಮಂಜುನಾಥ್ ಮೌರ್ಯ, ದಡಿಘಟ್ಟ ಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಐ ಕೆ ಮಂಜುನಾಥ್
