ಚನ್ನರಾಯಪಟ್ಟಣ, ಜು. 19: ಕರ್ನಾಟಕದ ಧೀಮಂತ ರಾಜಕಾರಣಿ, ಮಾಜಿ ಕಂದಾಯ ಸಚಿವ ಹಾಗೂ ಬಡವರ ಪಾಲಿನ ಅಣ್ಣಯ್ಯ ಎಂದೇ ಗುರುತಿಸಿಕೊಂಡಿದ್ದ ದಿವಂಗತ ಹೆಚ್.ಸಿ. ಶ್ರೀಕಂಠಯ್ಯ ಅವರ 100ನೇ ಜನ್ಮಶತಮಾನೋತ್ಸವವನ್ನು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕರ್ನಾಟಕ ವಿದ್ಯುಚ್ಛಕ್ತಿ ಕಾರ್ಖಾನೆ ಅಧ್ಯಕ್ಷ ಹೆಚ್.ಸಿ. ಲಲಿತ್ರಾಘವ್ ಅವರ ನೇತೃತ್ವದಲ್ಲಿ ಕುಟುಂಬದವರು, ಹೆಚ್.ಸಿ. ಶ್ರೀಕಂಠಯ್ಯ ಸೇವಾ ಸಮಿತಿ, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಪಟ್ಟಣದ ಹೆಚ್.ಸಿ. ಶ್ರೀಕಂಠಯ್ಯ ಸಭಾಂಗಣದಲ್ಲಿ ಸುಮಾರು 200 ಮಂದಿ ಪೌರಕಾರ್ಮಿಕರು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಬಟ್ಟೆಗಳನ್ನು ವಿತರಿಸಿ, ಸಿಹಿ ಹಂಚಲಾಯಿತು. ಇದೇ ಸಂದರ್ಭದಲ್ಲಿ ಬೃಹತ್ ಕೇಕ್ ಕತ್ತರಿಸಿ ಶ್ರೀಕಂಠಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಸಿ. ಲಲಿತ್ರಾಘವ್, “ನಮ್ಮ ತಾತನವರ ಜನ್ಮಶತಮಾನೋತ್ಸವವನ್ನು ಸ್ಮರಣೀಯವಾಗಿಸಲು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಇಂಗ್ಲಿಷ್ ಸ್ಪೋಕನ್ ಕೋರ್ಸ್, ವ್ಯಕ್ತಿತ್ವ ವಿಕಸನ ತರಬೇತಿ, ರಾಷ್ಟ್ರಮಟ್ಟದ ‘ಅಣ್ಣಯ್ಯ ಕಪ್’ ವಾಲಿಬಾಲ್ ಪಂದ್ಯಾವಳಿ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಆಸ್ಪತ್ರೆಯ ರೋಗಿಗಳಿಗೆ ನೆರವು ನೀಡುವ ಕಾರ್ಯವೂ ನಡೆಯುತ್ತಿದೆ” ಎಂದರು.
ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, “ಶ್ರೀಕಂಠಯ್ಯ ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ಅಭಿವೃದ್ಧಿ ಕಾರ್ಯಗಳು ಜನಮನದಲ್ಲಿ ಶಾಶ್ವತವಾಗಿವೆ. ಅವರ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಲಲಿತ್ರಾಘವ್ ಮತ್ತು ನವನೀಶ್ ಮಾಡುತ್ತಿದ್ದಾರೆ. ಲಲಿತ್ರಾಘವ್ ಅವರು ತಮ್ಮ ತಾತನ ಜನಪರ ಮೌಲ್ಯಗಳನ್ನು ಅಳವಡಿಸಿಕೊಂಡು ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಆಶಿಸಿದರು.

ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ. ಶಂಕರ್ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನುಗ್ಗೇಹಳ್ಳಿಯಲ್ಲೂ ಸೇವಾ ಕಾರ್ಯಕ್ರಮ
ಜನ್ಮಶತಮಾನೋತ್ಸವದ ಅಂಗವಾಗಿ ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಬ್ರೆಡ್ ವಿತರಿಸಲಾಯಿತು. ಯಂಗ್ ಸ್ಟಾರ್ ವಾಲಿಬಾಲ್ ಕ್ರೀಡಾಂಗಣದಲ್ಲಿ ಹೋಬಳಿ ವ್ಯಾಪ್ತಿಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹೋಬಳಿ ಕಾಂಗ್ರೆಸ್ ಯುವ ಮುಖಂಡ ಹುಲಿಕೆರೆ ಶಿವಸ್ವಾಮಿ ಮಾತನಾಡಿ, “ತಾಲ್ಲೂಕಿನ ಅಭಿವೃದ್ಧಿಗೆ ಹೆಚ್.ಸಿ. ಶ್ರೀಕಂಠಯ್ಯ ಅವರ ದೂರದೃಷ್ಟಿಯೇ ಪ್ರಮುಖ ಕಾರಣ. ಹೇಮಾವತಿ ಸಕ್ಕರೆ ಕಾರ್ಖಾನೆ, ಪಿಎಲ್ಡಿ ಬ್ಯಾಂಕ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಆರಂಭ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಅವರ ಕೊಡುಗೆ” ಎಂದು ಸ್ಮರಿಸಿದರು.
ಕಾರ್ಯಕ್ರಮಗಳಲ್ಲಿ ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ದಿವಂಗತ ಹೆಚ್.ಸಿ. ಶ್ರೀಕಂಠಯ್ಯ ಅವರಿಗೆ ಗೌರವ ನಮನ ಸಲ್ಲಿಸಿದರು.
– ಮಂಜುನಾಥ್ ಐ.ಕೆ.
