
ಕಾಲೇಜಿಗೆ ತರಿಸುತ್ತಿದ್ದ ಇಂಗ್ಲಿಷ್ ಪೇಪರನ್ನು ಬಸ್ಸಿನಲ್ಲಿ ವಿಶಾಲವಾಗಿ ತೆರೆದು, ಭಾರೀ ಸಂಶೋಧಕನ ಗತ್ತಿನಲ್ಲಿ ಓದುತ್ತಾ ಗಮನ ಸೆಳೆಯಲು ಯತ್ನಿಸುತ್ತಿದ್ದ ಓರ್ವ ಕಾಲೇಜು ಉಪನ್ಯಾಸಕನ ಪಕ್ಕದಲ್ಲಿ ಕುಳಿತಿದ್ದ ಗುಟ್ಕಾ ತಿಂದು ಗೆದ್ದಲಾಗಿದ್ದ ಹಲ್ಲುಗಳ ಹೈಸ್ಕೂಲ್ ಮೇಷ್ಟ್ರೊಬ್ಬರು ಜನರಿಗೆ, “ಹೀಗೆ ಬನ್ನಿ, ಅಲ್ಲಿ ನಿಲ್ಲಿ, ಮುಂದೆ ಕುಳಿತುಕೊಳ್ಳಿ, ಚೇಂಜ್ ರೆಡಿ ಇಟ್ಕೊಳ್ಳಿ” ಎಂದು ಕಂಡಕ್ಟರ್ನ ಸಹಾಯಕನಂತೆ ಅಡಿಷನಲ್ ಚಾರ್ಜ್ ತೆಗೆದುಕೊಳ್ಳುತ್ತಿದ್ದರು. ಅದರೊಳಗೆ ಕಣ್ಣು ಕಾಣದ ಭಿಕ್ಷುಕನೊಬ್ಬ ಎರಡೂ ಬದಿಯ ಸೀಟುಗಳ ನಡುವಿನ ಆಧಾರ ಕಂಬವನ್ನೇ ಎಂಟಾಣೆ ನಾಣ್ಯಗಳಿಂದ ಕುಟ್ಟುತ್ತಾ, “ಶಿವಪ್ಪಾ ಕಾಯೋ ತಂದೆ” ಹಾಡನ್ನು ಆರಂಭಿಸಿದ.
ಇತ್ತ ರೈತರ ಒತ್ತಡಕ್ಕೆ ಮಣಿದ ಡ್ರೈವರ್ ತನ್ನ ಕ್ಯಾಬಿನ್ನಲ್ಲೇ ಕೆಲವೊಂದು ಮೂಟೆಗಳನ್ನಿಡಲು ಅವಕಾಶ ಮಾಡಿಕೊಟ್ಟ ನಂತರ, ಅಂತೂ ಇಂತೂ ಬಸ್ ಎಂದಿನಂತೆ ತನ್ನ ಸಕಲೇಶಪುರ ಪ್ರಯಾಣ ಮುಂದುವರಿಸಿತು.
“ರೀ, ಕಂಡಕ್ಟರ್! ಈ ಕುಡುಕನ್ನ ಇಳಿಸಲಿಲ್ಲವಲ್ಲ ರೀ? ವಾಸನೆ ತಡೆಯಕ್ಕಾಗ್ತಿಲ್ಲ. ಈ ಮೀನು ಬೇರೆ! ನಮ್ಮ ಜೀವನೇ ಹೋಗ್ತಾ ಇದೆ. ಕೆಳಗಿಡೋ ಮೀನಿನ ಕವರ್ನಾ, ಕೆಳಕ್ಕಾಕೋ ಮಾರಾಯ!” ಎಂದರು ಕರೀಗೌಡರು.
“ಏನ್ರೀ ಗೌಡ್ರೇ, ಭಾರೀ ಸಂಪನ್ನರಂಗೆ ಮಾತಾಡ್ತೀರಾ! ನಿಮ್ಮ ಬ್ಯಾಗ್ ತೋರಿಸಿ. ನೀವು ಮೀನು ತಗೊಂಡಿಲ್ಲವಾ? ತರ್ಸಿ ನೋಡೋಣ. ನಿಮಗೇನೋ ಜಾಗ ಸಿಕ್ಕಿದೆ, ಅದಕ್ಕೆ ಆರಾಮಾಗಿ ಕೂತಿದ್ದೀರಿ. ನೀವು ಕುಡಿಯಲ್ವಾ? ಆದ್ರೆ ಕೆಂಪನೇದನ್ನ ಕುಡೀತೀರಿ ಅಷ್ಟೇನಾ? ನಿಮ್ಮ ಮನೇಲೇ ಮಾರಲ್ವಾ? ನೀವು ಕೇಸ್ ಕೇಸ್ಗಟ್ಟಲೆ ತಗೊಂಡೋಗಿ ಒಂದಕ್ಕೆ ಎರಡು ರೇಟಿಗೆ ಮಾರಿ ಊರಿಗೆಲ್ಲಾ ಕುಡಿಸ್ತೀರಿ. ಇಲ್ಲಿ ನನಗೆ ಕುಡುಕ ಅಂತೀರಾ? ಕುಡುಕರೇ ಸಾರ್ ಸತ್ಯ ಹೇಳೋದು; ನಾವೇ ನಿಜ ಮಾತಾಡೋದು.
ಅದೇ ನಿಮ್ಮ ತಂಗಿ ಮಗಳು ಯಾರ ಜೊತೆಯೋ, ಅದೇ ಪಕ್ಕದ ತೋಟದ ರೈಟರ್ ಜೊತೆ ಓಡೋದ್ಲಂತೆ. ಏನಾಯ್ತು ಆಮೇಲೆ? ಏನಾದ್ರೂ ಗೊತ್ತಾಯ್ತಾ?” ಎಂದು ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ, ಹಾಗೆಯೇ ಮುಜುಗರವಾಗುವ ಪ್ರಶ್ನೆಯನ್ನು ಸಮಸ್ತ ಬಸ್ ಪ್ರಯಾಣಿಕರೆಲ್ಲರಿಗೂ ಕೇಳುವಂತೆ ಪಾಶುಪತಾಸ್ತ್ರದಂತೆ ಠಂಯ್ ಎಂದು ಬಾಣ ಬಿಟ್ಟ.
ಕರೀಗೌಡರು ತಮ್ಮ ತಲೆಯ ಮೇಲಿನ ಟೋಪಿಯನ್ನು ಅಲ್ಲೇ ಐದಾರು ಬಾರಿ ತಿಕ್ಕಿ ತಲೆ ತುರಿಸಿಕೊಳ್ಳುತ್ತಾ ಸರಿಯಾಗಿ ಕೂರಿಸಿಕೊಂಡು, ಆ ಮೀನಿನ ಆಸಾಮಿಯನ್ನು ನುಂಗುವಂತೆ ನೋಡಿ, “ನನ್ನ ಮರ್ಯಾದೆಯನ್ನೇ ಈ ಬಸ್ನಲ್ಲಿ ಎಲ್ಲರ ಎದುರಲ್ಲೇ ತೆಗೆದನಲ್ಲ!” ಎಂದು ಕುಳಿತಲ್ಲೇ ಕನಲತೊಡಗಿ, ಏನೂ ಕೇಳಿಸಿಯೇ ಇಲ್ಲವೆಂಬಂತೆ ಸುಮ್ಮನಾದರು.

ಈ ಅಸಾಮಿ ಸುಮ್ಮನಿರದೆ, “ಅಲ್ಲಾ ಗೌಡ್ರೇ, ಹೆಣ್ಣು ಹುಡುಗಿಗೆ ಇಪ್ಪತ್ನಾಲ್ಕೋ ಇಪ್ಪತ್ತೈದೋ ವರ್ಷ ಇರಬೇಕು. ಯಾರೋ ಕೊಡಗಿನವನಂತೆ. ಹುಡುಗಿ ಮನೆಯವರೇ ಸುಮ್ಮನಾದ್ರಂತೆ, ಹೌದಾ? ಮದುವೆ ಖರ್ಚು ಉಳೀತು ಅಂತಾಯ್ತು ಹಾಗಾದ್ರೆ. ಆದ್ರೂ ನಿಮ್ಮನ್ನೊಂದು ಮಾತು ಕೇಳಿ ಓಡಿಹೋಗಬೇಕಿತ್ತು. ಏನೇ ಹೇಳಿ, ಹೀಗಾಗಬಾರದಿತ್ತು. ಛೇ… ಛೇ…” ಎನ್ನಬೇಕೇ?
ಕರೀಗೌಡರು ನಖಶಿಖಾಂತ ಉರಿದೆದ್ದು, “ಏ ಪುಟ್ಟಸ್ವಾಮಿ, ನೋಡಿಲ್ಲಿ ಈ ಕುಡುಕ ನನ್ನ ಮಗ ಏನು ಬೊಗಳ್ತಿದಾನೆ!” ಎಂದಬ್ಬರಿಸಿದರು.
ಮುಂದಿನ ನಾಲ್ಕನೇ ಸೀಟಿನಲ್ಲಿದ್ದ ಪುಟ್ಟಸ್ವಾಮಿ ಕರೀಗೌಡರ ತಮ್ಮನ ಮಗ. ವ್ಯವಸಾಯ ಮಾಡಿಕೊಂಡಿದ್ದವನು ಸಂತೆಗೆಂದು ಇಂದು ಮೂಡಿಗೆರೆಗೆ ಎಲ್ಲರಂತೆ ಬಂದಿದ್ದ. ಭಾರಿ ಗಾತ್ರದ ಪುಟ್ಟಸ್ವಾಮಿ ಎದ್ದೇನೋ ನಿಂತ. ಆದರೆ ಈ ಭೂತಾಯಿ ಮೀನಿನ ಆಸಾಮಿ ಇದ್ದಲ್ಲಿಗೆ ಬರಲು ಮಾತ್ರ ಅಸಾಧ್ಯವಾಗಿತ್ತು. ಅಷ್ಟೊಂದು ಜನ ತುಂಬಿದ್ದ ಬಸ್ನಲ್ಲಿ ಹೆಜ್ಜೆ ಕಿತ್ತಿಡುವುದೂ ಸಾಹಸದ ಕೆಲಸವೇ ಆಗಿತ್ತು.
ಅಷ್ಟರಲ್ಲಿ ಜನ್ನಾಪುರದ ಸ್ಟಾಪ್ ಬಂದಿದ್ದರಿಂದ ಅನೇಕರು ಬಸ್ನಿಂದ ಇಳಿಯಲಾರಂಭಿಸಿದರು. ಕಂಡಕ್ಟರ್ ಇನ್ನೂ ಕೆಲವರಿಗೆ ಟಿಕೆಟ್ ನೀಡಿರಲಿಲ್ಲ. ಕಂಡಕ್ಟರ್ ಡ್ರೈವರ್ಗೆ ಬೈಯತೊಡಗಿದ.
“ಸೇತುವೆ ಬಳಿಯೇ ನಿಲ್ಲಿಸು. ಎಲ್ಲರಿಗೂ ಟಿಕೆಟ್ ಆದ ಮೇಲೆ ಜನ್ನಾಪುರಕ್ಕೆ ಬಿಡು ಎಂದಿದ್ದೆ. ಈಗ ನೋಡು, ಇನ್ನೂ ಯಾರಿಗೂ ಸರಿಯಾಗಿ ಟಿಕೆಟ್ ಆಗಿಲ್ಲ. ಆಗಲೇ ಜನ ಸ್ಟಾಪ್ ಬಂತಂತ ಇಳಿಯಲಿಕ್ಕೆ ಶುರು ಮಾಡಿದ್ದಾರೆ” ಎಂದು ಆರೋಪಿಸಿದ.
ಇನ್ನೇನು ಆರು ತಿಂಗಳಲ್ಲಿ ನಿವೃತ್ತಿಯಾಗಬೇಕಾಗಿದ್ದ ಡ್ರೈವರ್ ತಾಳ್ಮೆಯಿಂದಲೇ, “ಸರಿ, ನಿಲ್ಲಕ್ಕೆ ಹೇಳಿ ಟಿಕೆಟ್ ಕೊಡೋ ಮಾರಾಯ. ಸೇತುವೆ ಬಳಿ ನಿಲ್ಲಿಸಿದ್ದಿದ್ರೆ ಈ ಲೋಡಲ್ಲಿ ಆ ಏರು ಹತ್ತೋಕೆ ಆಗ್ತಿರಲಿಲ್ಲ. ಅದಕ್ಕೆ ಅದೇ ಸ್ಪೀಡಲ್ಲಿ ಇಲ್ಲಿಗೆ ತಂದಿದ್ದೀನಿ. ನಾನಿನ್ನೂ ಬಸ್ಸ್ಟಾಪ್ನಲ್ಲಿ ನಿಲ್ಲಿಸಿಲ್ಲವಲ್ಲ” ಎಂದ.
“ಊರು ಬಂದ ಮೇಲೆ ಬಸ್ಸ್ಟಾಪಾದ್ರೇನು? ಎಲ್ಲಾದ್ರೇನು? ನೀನು ನಿಲ್ಲಿಸಿರುವ ಜಾಗ ಅವರವರ ಊರಿಗೆ ಹೋಗಲು ಹತ್ತಿರದಲ್ಲೇ ಇರುವ ಕೈಮರದ ಬಳಿಯೇ ಇದೆ. ಕೇಳಿದ್ರೆ ಹುಡುಗರಾದರೆ ‘ಪಾಸ್’ ಅಂತಾರೆ. ವಯಸ್ಸಾದವರಾದ್ರೆ ನಾಲ್ಕು ರೂಪಾಯಿ ಟಿಕೆಟ್ಗೆ ಎರಡು ರೂಪಾಯಿ ಕೊಟ್ಟು ‘ಟಿಕೆಟ್ ಬೇಡ’ ಅಂತಾರೆ. ಏನು ಮಾಡೋದು?” ಎಂದು ಕಂಡಕ್ಟರ್ ಉತ್ತರಿಸಿದ.
ಪುಟ್ಟಸ್ವಾಮಿಗೆ ಕರೆದಂತೆ ನಮಗಾದರೂ ಕಂಪ್ಲೇಂಟ್ ಕೊಟ್ಟಿದ್ದರೆ, ನಮ್ಮ ನಮ್ಮ ಹೀರೋಯಿನ್ಗಳ ಮುಂದೆ ಈ ಕೈಲಾಗದ ಕುಡುಕನಿಗೆ ನಾಲ್ಕು ತದುಕಿ ಹೀರೋಗಳಾಗಬಹುದಿತ್ತೆಂದು ಅನೇಕ ಕಾಲೇಜು ಹುಡುಗರು ಮನಸ್ಸಿನಲ್ಲೇ ಅಂದುಕೊಂಡು, “ಈ ಕರೀಗೌಡ ಎಂಥ ಕೆಲಸ ಮಾಡಿಬಿಟ್ಟ!” ಎಂದು ಹಳಹಳಿಸತೊಡಗಿದರು.
ಕುಡುಕನೊಂದಿಗೆ ಕುಸ್ತಿ ಮಾಡಿ ಅಪಮಾನಿತನಾಗಲು ಇಷ್ಟವಿಲ್ಲದ ಪುಟ್ಟಸ್ವಾಮಿ, ಮೀನಿನ ಆಸಾಮಿಯನ್ನು ಕರೆದು, “ಕೂರಲು ಜಾಗವಿಲ್ಲವೇನಯ್ಯಾ? ಬಾಯಿಲ್ಲಿ ನನಗೋ ಕಾಲು ಮರಗಟ್ಟಿ ನೋಯುತ್ತಿದೆ. ನಿಲ್ತೇನೆ, ಸರಿಯಾಗುತ್ತೆ” ಎಂದು ಹೇಳಿ ತನ್ನ ಸ್ಥಳವನ್ನೇ ಬಿಟ್ಟುಕೊಟ್ಟ.
ತರಕಾರಿ ಚೀಲ ಬೀಳಿಸಿದ್ದವನು ಸಾಕಷ್ಟು ಸಾಮಾನು ಎತ್ತಿಕೊಟ್ಟಿದ್ದರೂ, ಮುಕ್ಕಾಲು ಮಾತ್ರ ಸಿಕ್ಕಿದ್ದವು. ಚೀಲದ ಯಜಮಾನ ಮಾತ್ರ ಇನ್ನೂ ಬುಸುಗುಡುತ್ತಲೇ ಇದ್ದ. ಬೀಳಿಸಿದ್ದವನು ಆತನನ್ನು ಸಮಾಧಾನಿಸಲು ಏನೇನು ಸಾಧ್ಯವೋ ಅಷ್ಟನ್ನೆಲ್ಲ ಸರ್ಕಸ್ ಮಾಡುತ್ತಲೇ ಇದ್ದ.
ಅಷ್ಟರಲ್ಲಿ ಬೆಟ್ಟದಮನೆ ಸ್ಟಾಪ್ ಬಂತು. ತರಕಾರಿ ಚೀಲದವ ದುಸದುಸ ಎನ್ನುತ್ತಲೇ ಇಳಿದುಹೋದ.
ಇಂಗ್ಲಿಷ್ ಪೇಪರ್ ಓದುವುದರಲ್ಲಿ ಮುಳುಗಿಯೇ ಹೋಗಿದ್ದ ಉಪನ್ಯಾಸಕ, ಕಂಡಕ್ಟರ್ ಬಂದರೂ ತಲೆಯೆತ್ತದೆ ಓದುವಂತೆ ನಟಿಸುತ್ತಾ ಕುಳಿತಿದ್ದ. ಮುಂದೆ ಕಿರುಗುಂದದ ಬಳಿ ತನ್ನ ಸ್ಟಾಪ್ ಬಂತೆಂದು ತಡಬಡಾಯಿಸಿ ಎಚ್ಚರಗೊಂಡಂತೆ ಮಾಡಿ, ಅಲ್ಲಿನ ಹತ್ತು ರೂಪಾಯಿ ಚಾರ್ಜ್ ಬದಲಿಗೆ ಐದು ರೂಪಾಯಿಯನ್ನು ಕಂಡಕ್ಟರ್ ಕೈಯಲ್ಲಿಟ್ಟು, “ಟಿಕೆಟ್ ಬೇಡ” ಎಂದು ಇಳಿದುಹೋದ.
ಅಷ್ಟರಲ್ಲಾಗಲೇ ನನಗೂ ಒಂದು ಸೀಟು ಸಿಕ್ಕಿತ್ತು. ನನಗೆ ಟಿಕೆಟ್ ಕೊಡುತ್ತಾ ಕಂಡಕ್ಟರ್, “ಮಾನ ಇಲ್ಲ, ಮರ್ಯಾದೆ ಇಲ್ಲ. ಜಂಟ್ಲ್ಮನ್ನಂತೆ ಕಾಣ್ತಾನೆ. ಕಾಲೇಜಿನಲ್ಲಿ ಪಾಠ ಮಾಡ್ತಾನಂತೆ. ಒಂದು ಟಿಕೆಟ್ ತಗೊಳ್ಳಾಕಾಗಲ್ಲ. ಕೈಗೆ ಸಿಕ್ಕಿದಷ್ಟು ಕೊಟ್ಟು ಟಿಕೆಟ್ ಬೇಡ ಅಂತಾನೆ. ಇಂಥವರಿದ್ರೆ ಸರ್ಕಾರ ಉಳಿದಂಗೇ…” ಎಂಬಂತೆ ಸ್ವಗತದಲ್ಲೇ ಹೇಳಿಕೊಂಡ.
ನಷ್ಟ ಅನುಭವಿಸಿದ ಸರ್ಕಾರದ ಬಗ್ಗೆ ಹೇಳಿದವ, ಲಾಭ ಮಾಡಿಕೊಂಡ ತನ್ನ ಬಗ್ಗೆ ಮಾತ್ರ ಏನೂ ಹೇಳಿಕೊಳ್ಳಲಿಲ್ಲ.
ಬಸ್ ಸರಿಸುಮಾರು ಅರ್ಧಕ್ಕರ್ಧ ಖಾಲಿಯಾಗಿತ್ತು. ಆಚೀಚೆ ನೋಡುತ್ತೇನೆ. ಕರೀಗೌಡ, ಪುಟ್ಟಸ್ವಾಮಿ, ಮೀನಿನ ಆಸಾಮಿ, ಹದಿನಾರು ಕೆಲಸದವರು ಯಾರೂ ಬಸ್ನೊಳಗೇ ಇರಲಿಲ್ಲ. ಅರೆರೆ! ಇವರೆಲ್ಲ ಯಾವಾಗ ಇಳಿದುಹೋದರೋ ಎಂದು ಅಚ್ಚರಿಯಾಯಿತು.
ಸರ್ಕಾರಿ ಬಸ್, ಅದರಲ್ಲೂ ಸರ್ಕಾರಿ ಷಟಲ್ ಬಸ್. ಅದರಲ್ಲೂ ಸಂತೆ ದಿನದ ಸರ್ಕಾರಿ ಷಟಲ್ ಬಸ್. ನಿಜವಾಗಿಯೂ ಒಂದು ಗ್ರಾಮ ಭಾರತವನ್ನೇ ತನ್ನ ಹೊಟ್ಟೆಯಲ್ಲಿಟ್ಟುಕೊಂಡು ತೇಲುತ್ತಾ, ತೂಗುತ್ತಾ, ಮುಗ್ಗರಿಸುತ್ತಾ, ಇಳಿಜಾರಿನಲ್ಲಿ ಈಜುತ್ತಾ, ಏರಿಯಲ್ಲಿ ಏದುಸಿರು ಬಿಡುತ್ತಾ, ಸಮತಟ್ಟು ತಲುಪಿ ನಿಟ್ಟುಸಿರು ಬಿಡುತ್ತಾ ಅಂತೂ ನಿಲ್ಲದೆ ಸಾಗುತ್ತಲೇ ಇರುತ್ತದೆ. ಭಾರತದಂತಹ ದೇಶವೂ ದೇವರ ದಯೆಯಿಂದ ಹೀಗೆಯೇ ನಡೆಯುತ್ತಿರುವಂತೆ ಅನಿಸುತ್ತದೆ.
ಮುಂದುವರೆಯುವುದು…..!!!

