ಚನ್ನರಾಯಪಟ್ಟಣ, ಜು. 4: ತಾಲೂಕಿನ ಬಾಗೂರು ಹೋಬಳಿ ಕೇಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಮರುವನಹಳ್ಳಿ ಕೃಷ್ಣೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಡಿ.ಎನ್. ನಾಗರಾಜ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಮರುವನಹಳ್ಳಿ ಕೃಷ್ಣೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ವಿಜಯೇಂದ್ರ ಅವರು ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಮರುವನಹಳ್ಳಿ ಕೃಷ್ಣೇಗೌಡ ಅವರನ್ನು ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎನ್. ಬಾಲಕೃಷ್ಣ, ಸಹಕಾರ ಕ್ಷೇತ್ರದಿಂದ ಮಾತ್ರ ರೈತರ ಉಳಿವು ಸಾಧ್ಯ. ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ನೆರವಿನಿಂದ ಸಂಘದ ಮೂಲಕ ರೈತರಿಗೆ ಸುಮಾರು 11 ಕೋಟಿ ರೂ.ಗಳಷ್ಟು ಶೂನ್ಯ ಬಡ್ಡಿದರದ ಸಾಲ ವಿತರಿಸಲಾಗಿದೆ. ನಾಲ್ಕು ಬಾರಿ ಜಾರಿಯಾದ ಸಾಲಮನ್ನಾ ಯೋಜನೆಯಡಿ 12 ಕೋಟಿ ರೂ.ಗಳಷ್ಟು ಸಾಲ ಮನ್ನಾ ಆಗಿದ್ದು, ಸಂಘದ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಮಾತನಾಡಿ, ಸಂಘದ ಅಭಿವೃದ್ಧಿ ಕಾಮಗಾರಿಗಳಿಗೆ ಸದಸ್ಯರ ಮನವಿ ಮೇರೆಗೆ ಮಹಾಮಂಡಳದ ವತಿಯಿಂದ 5 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ, ಮೂಡನಹಳ್ಳಿ ಚಂದ್ರೇಗೌಡ, ವಿ.ಎನ್. ಮಂಜುನಾಥ್, ಸಂಘದ ಉಪಾಧ್ಯಕ್ಷ ಗಂಗಾಧರ್, ಉದ್ಯಮಿಗಳಾದ ಅಣತಿ ಯೋಗೀಶ್, ಬ್ಲೂ ಲೈನ್ ದೇವರಾಜ್, ಪಿಎಸ್ಐ ನವೀನ್, ಸಂಘದ ನಿರ್ದೇಶಕರಾದ ಬಿ.ವಿ. ರಂಗಪ್ಪ, ಬಿ.ವಿ. ಸುರೇಶ್, ಅನ್ನಪೂರ್ಣ, ಚನ್ನಕೇಶವಗೌಡ (ಹರೀಶ್), ಪದ್ಮ, ವಿಜಯ್ ಕುಮಾರ್, ಸಾಗರ್, ಬಿ.ಎಸ್. ರಂಗಪ್ಪ, ಎಚ್ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಕೆ. ಅಭಿಲಾಶ್, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಮುಖಂಡರಾದ ಮರಗೂರು ಅನಿಲ್, ಕೋಟೆ ಮೋಹನ್, ಕಾಳೇನಹಳ್ಳಿ ಆನಂದ್, ಕುಂಬಾರಹಳ್ಳಿ ರಮೇಶ್, ಬಾಗೂರು ಮನು, ಚಂದ್ರೇಗೌಡ, ಲಕ್ಷ್ಮಣ್, ಮಧು, ಮರುವನಹಳ್ಳಿ ಶೇಖರ್, ಮೂಡನಹಳ್ಳಿ ಕೃಷ್ಣೇಗೌಡ, ಎಂ.ಸಿ. ಸತೀಶ್, ಸಂಪತ್ ಕುಮಾರ್, ಕೋಟೆ ಮಂಜಣ್ಣ, ಜೆಡಿಎಸ್ ಯುವ ಮುಖಂಡ ಮರುವನಹಳ್ಳಿ ಮನೋಜ್, ಕೃಷಿ ಪತ್ತಿನ ಕಾರ್ಯನಿರ್ವಹಣಾಧಿಕಾರಿ ಡಿ.ಎನ್. ಆನಂದ್, ಸಹಾಯಕ ರಮೇಶ್, ರೇಣುಕಾ ಪ್ರಸನ್ನ, ಗಿರೀಶ್ ಎಂ.ಡಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
