ತುಮಕೂರು, ಜು. 4: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ವತಿಯಿಂದ ತುಮಕೂರು ಹಾಗೂ ತಿಪಟೂರು ತಾಲೂಕಿನ ಶುದ್ಧಗಂಗಾ ಘಟಕಗಳ ಪ್ರೇರಕರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯನ್ನು ತುಮಕೂರು-1 ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಹಾಗೂ ಶುದ್ಧಗಂಗಾ ವಿಭಾಗದ ನಿರ್ದೇಶಕ ಸಂತೋಷ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು-1 ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಶುದ್ಧಗಂಗಾ ಯೋಜನೆಯ ಉದ್ದೇಶ ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಪ್ರೇರಕರಿಗೆ ಮಾಹಿತಿ ನೀಡಿದರು.

ಬಳಿಕ ಮಾತನಾಡಿದ ಶುದ್ಧಗಂಗಾ ವಿಭಾಗದ ನಿರ್ದೇಶಕ ಸಂತೋಷ್ ಕುಮಾರ್, 2026-27ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ 50 ಹೊಸ ಶುದ್ಧಗಂಗಾ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಶುದ್ಧಗಂಗಾ ಘಟಕಗಳು ತಮ್ಮದೇ ಎನ್ನುವ ಭಾವನೆಯಿಂದ ಪ್ರೇರಕರು ಕರ್ತವ್ಯ ನಿರ್ವಹಿಸಬೇಕು. ಘಟಕಗಳಲ್ಲಿ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಶುದ್ಧ ಕುಡಿಯುವ ನೀರನ್ನು ಹೆಚ್ಚಿನ ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಶುದ್ಧ ಜಲ ಅಭಿಯಾನದ ಮೂಲಕ ಪೂಜ್ಯರ ಆಶಯವನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಪ್ರತಿ ಶುದ್ಧಗಂಗಾ ಘಟಕದಲ್ಲಿ ಕನಿಷ್ಠ 351 ಗ್ರಾಹಕರ ಗುರಿ ಸಾಧಿಸುವಂತೆ ಪ್ರೇರಣೆ ನೀಡಿದ ಅವರು, ಪರಿಣಾಮಕಾರಿ ಮನೆ ಭೇಟಿ, ಸಾರ್ವಜನಿಕ ಸಂಪರ್ಕ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಶುದ್ಧಗಂಗಾ ಘಟಕಗಳಲ್ಲಿನ ಯಂತ್ರೋಪಕರಣಗಳ ನಿರ್ವಹಣೆ ಹಾಗೂ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕುರಿತು ಪ್ರೇರಕರಿಗೆ ಅಗತ್ಯ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಶುದ್ಧಗಂಗಾ ವಿಭಾಗದ ಯೋಜನಾಧಿಕಾರಿಗಳಾದ ಯುವರಾಜ್ ಜೈನ್, ಪ್ರವೀಣ್ ಕುಮಾರ್, ಆಂತರಿಕ ಲೆಕ್ಕ ಪರಿಶೋಧಕ ಅಭಿಲಾಶ್, ಮೇಲ್ವಿಚಾರಕರಾದ ಶಿವರಾಂ ಮತ್ತು ಲೋಕೇಶ್ ಸೇರಿದಂತೆ ಶುದ್ಧಗಂಗಾ ಘಟಕಗಳ ಪ್ರೇರಕರು ಉಪಸ್ಥಿತರಿದ್ದರು.
ಕೆ.ಬಿ.ಚಂದ್ರಚೂಡ.
