ಚನ್ನರಾಯಪಟ್ಟಣ: ತಾಲ್ಲೂಕಿನ ಹಿರಿಸಾವೆ ಹೋಬಳಿಯ ದಿಡಗ ಗ್ರಾಮದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರದಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಶಿವಾಲಯದ ಆವರಣವನ್ನು ಸ್ವಚ್ಛಗೊಳಿಸಿ ಸಂರಕ್ಷಣೆಗೆ ಮುಂದಾದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ಸರ್ಕಾರಿ ಪದವಿ ಪೂರ್ವ ಮತ್ತು ಪ್ರೌಢಶಾಲೆ ದಿಡಗ, ಸಮರ್ಪಣಾ ಸೇವಾ ಸಂಸ್ಥೆ ಕರ್ನಾಟಕ ಹಾಗೂ ಸರ್ಕಾರಿ ಪ್ರೌಢಶಾಲೆ ದಿಡಗದ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಈ ಶಿಬಿರ ನಡೆಯುತ್ತಿದೆ.
ಸೆ. 7ರಂದು ಹಳೆ ದಿಡಗ ಗ್ರಾಮದಲ್ಲಿರುವ ಪುರಾತನ ಚೋಳರ ಕಾಲದ ಈಶ್ವರ ದೇವಾಲಯದಲ್ಲಿ ‘ದೇವಾಲಯಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಧ್ಯೇಯವಾಕ್ಯದೊಂದಿಗೆ ಶ್ರಮದಾನ ನಡೆಯಿತು.

ಪುರಾತನ ಶಿವಾಲಯವು ಹಲವು ವರ್ಷಗಳಿಂದ ನಿರ್ವಹಣೆಯ ಕೊರತೆಯಿಂದ ಶಿಥಿಲಾವಸ್ಥೆ ತಲುಪಿದ್ದು, ದೇವಾಲಯದ ಆವರಣದಲ್ಲಿ ಸುಮಾರು 6ರಿಂದ 10 ಅಡಿ ಎತ್ತರದವರೆಗೆ ಗಿಡಗಂಟೆಗಳು ಬೆಳೆದು ದೇಗುಲವೇ ಅವುಗಳ ನಡುವೆ ಮರೆಯಾಗಿತ್ತು. 120ಕ್ಕೂ ಹೆಚ್ಚು ಎನ್ಎಸ್ಎಸ್ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡು ಗಿಡಗಂಟೆಗಳನ್ನು ತೆರವುಗೊಳಿಸಿ ದೇವಾಲಯದ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿದರು.
ವಿದ್ಯಾರ್ಥಿಗಳು ದೇವಾಲಯದಲ್ಲಿದ್ದ ಪುರಾತನ ಶಿವಲಿಂಗವನ್ನು ಸ್ವಚ್ಛಗೊಳಿಸಿದರು. ದೇವಾಲಯದ ಸ್ತಂಭಗಳು, ಕಲಾತ್ಮಕ ಕೆತ್ತನೆಗಳು, ಶಿಲ್ಪಕಲಾ ವಿಗ್ರಹಗಳು, ಮೇಲ್ಭಾಗ ಹಾಗೂ ಒಳಭಾಗ ಸೇರಿದಂತೆ ದೇಗುಲದ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸಿ, ಪುರಾತನ ದೇವಾಲಯದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗೆ ಮತ್ತೆ ಗೋಚರತೆ ನೀಡಿದರು.
ನಂತರ ಶಿವಲಿಂಗಕ್ಕೆ ಫಲಪುಷ್ಪಗಳಿಂದ ಪೂಜೆ ಸಲ್ಲಿಸಿ, ಪುರಾತನ ಸ್ಮಾರಕಗಳ ಸಂರಕ್ಷಣೆಯ ಅಗತ್ಯದ ಕುರಿತು ಅರಿವು ಮೂಡಿಸಿದರು.
ಯುವಕರಲ್ಲಿ ಇತಿಹಾಸ ಮತ್ತು ಸಂರಕ್ಷಣೆಯ ಅರಿವು
ಶಿಬಿರದ ಅಂಗವಾಗಿ ನಡೆದ ಈ ಶ್ರಮದಾನವು ಕೇವಲ ಸ್ವಚ್ಛತಾ ಕಾರ್ಯಕ್ಕೆ ಸೀಮಿತವಾಗದೆ, ಗ್ರಾಮೀಣ ಭಾಗದಲ್ಲಿರುವ ಪುರಾತನ ದೇವಾಲಯಗಳು ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಜವಾಬ್ದಾರಿಯ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಿ ಗಮನ ಸೆಳೆಯಿತು.
ಶಿಥಿಲಾವಸ್ಥೆಯಲ್ಲಿದ್ದ ಪುರಾತನ ಶಿವಾಲಯವನ್ನು ಸ್ವಚ್ಛಗೊಳಿಸುವ ಮೂಲಕ ವಿದ್ಯಾರ್ಥಿಗಳು ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರಿನ ಸಲಹೆಗಾರ ಪ್ರೊ. ಜಿ.ಬಿ. ಶಿವರಾಜು, ಊರಿನ ಹಿರಿಯ ಮುಖಂಡರು, ಗ್ರಾಮಸ್ಥರು, ಸಮರ್ಪಣಾ ತಂಡದ ಸದಸ್ಯರು ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಎನ್ಎಸ್ಎಸ್ ಅಧಿಕಾರಿಗಳಾದ ಡಾ. ರಾಘವೇಂದ್ರ, ಡಾ. ಗಿರೀಶ್, ಶ್ರೀಮತಿ ಪುಷ್ಪಾ ಕೆ.ಎಸ್. ಮತ್ತು ಕುಮಾರಿ ಸವಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಮರ್ಪಣಾ ಸಂಸ್ಥೆಯ ಅಧ್ಯಕ್ಷೆ ಮಹಾದೇವಮ್ಮ, ದಿಡಗ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪುರಾತನ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿ ಅದರ ಮಹತ್ವವನ್ನು ಜನರಿಗೆ ಪರಿಚಯಿಸುವಲ್ಲಿ ಎನ್ಎಸ್ಎಸ್ ವಿದ್ಯಾರ್ಥಿಗಳು ಕೈಗೊಂಡ ಶ್ರಮದಾನವು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು.
ವರದಿ: ಗೊರೂರು ಅನಂತರಾಜು, ಹಾಸನ
