ಚನ್ನರಾಯಪಟ್ಟಣ, ಜು. 25: ಚನ್ನರಾಯಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ವತಿಯಿಂದ ಸೆಪ್ಟೆಂಬರ್ನಲ್ಲಿ ನಡೆಯಲಿರುವ 75ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಆಷಾಢ ಏಕಾದಶಿಯ ಶುಭದಿನದಂದು ಗಣೇಶ ಮೂರ್ತಿ ನಿರ್ಮಾಣಕ್ಕೆ ಬಳಸುವ ಮಣ್ಣಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಭಕ್ತಿ, ಶ್ರದ್ಧೆ ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕ ಪ್ರಸನ್ನ ಗಣಪತಿ ಸೇವಾ ಸಮಿತಿಯು ರಾಜ್ಯದಲ್ಲೇ ವಿಶೇಷ ಸ್ಥಾನಮಾನ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ 74 ವರ್ಷಗಳಿಂದ ನಿರಂತರವಾಗಿ ಗಣೇಶೋತ್ಸವವನ್ನು ಜಾತ್ಯತೀತ ಹಾಗೂ ಸರ್ವಧರ್ಮ ಸಮನ್ವಯದ ಸಂದೇಶದೊಂದಿಗೆ ಆಚರಿಸಿಕೊಂಡು ಬರುತ್ತಿರುವ ಸಮಿತಿಯು, 75ನೇ ವರ್ಷದ ಮಹೋತ್ಸವದ ಅಂಗವಾಗಿ ಮಣ್ಣಿನ ಪೂಜೆಯೊಂದಿಗೆ ಸಿದ್ಧತೆಗಳಿಗೆ ಚಾಲನೆ ನೀಡಿದೆ. ಪ್ರತಿವರ್ಷದಂತೆ ಈ ಬಾರಿಯೂ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಅನ್ನದಾಸೋಹ ಸೇರಿದಂತೆ ನಾಡು, ನುಡಿ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಸನ್ನ ಗಣಪತಿ ಆಸ್ಥಾನ ಮಂಟಪದ ಮೇಲ್ಚಾವಣಿ ದುರಸ್ತಿಗೆ ಪುರಸಭೆಯಿಂದ ಆರ್ಥಿಕ ನೆರವು ದೊರೆತಿದ್ದು, ಕಾಮಗಾರಿ ಪೂರ್ಣಗೊಂಡಿದೆ ಎಂದು ಶಾಸಕರು ಹೇಳಿದರು. ತಾಲೂಕಿನಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಗಣಪತಿಯ ಕೃಪೆಯಿಂದ ಉತ್ತಮ ಮಳೆಯಾಗಿ ನಾಡು ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿದರು.
ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್. ಅಶೋಕ್ ಮಾತನಾಡಿ, ಈ ಬಾರಿ 75ನೇ ವರ್ಷದ ಮಹೋತ್ಸವದ ಅಂಗವಾಗಿ 58 ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ, ಅನ್ನದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಮಹೋತ್ಸವವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಲು ಪಟ್ಟಣದ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನಡೆಯುತ್ತಿರುವ ಗಣೇಶೋತ್ಸವದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ₹10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್, ಗುಲಸಿಂದ ಶ್ರೀ ರಾಘವೇಂದ್ರ ಮಠದ ಧರ್ಮದರ್ಶಿ ರಾಧಾಕೃಷ್ಣ, ಸುಲೋಚನಾ ರಾಧಾಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಪುರಸಭೆಯ ಮಾಜಿ ಅಧ್ಯಕ್ಷ ಸಿ.ಎನ್. ಮೋಹನ್, ಬನಶಂಕರಿ ರಘು, ಎಸ್.ಎ. ಗಣೇಶ್, ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಕೆ. ಕೃಷ್ಣ, ಸದಸ್ಯರಾದ ಗಜಾನನ ಮನೋಹರ್, ಸಿ.ವೈ. ಸತ್ಯನಾರಾಯಣ, ನಂಜುಂಡಮೈಮ್, ಮಹದೇವ್, ಅರ್ಪಿತಾ ಪಟೇಲ್ ಮಂಜುನಾಥ್, ಪುರಿಬಟ್ಟಿ ಮಂಜಣ್ಣ, ಚಿಕ್ಕಬಿಳತ್ತಿ ಗಂಗಾಧರ್, ತೆಂಕನಹಳ್ಳಿ ಉಮೇಶ್, ಕಲಾವಿದ ರವೀಂದ್ರ, ಗಣೇಶ ಮೂರ್ತಿ ಶಿಲ್ಪಿ ಪ್ರಸನ್ನ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
– ಮಂಜುನಾಥ್ ಐ ಕೆ
