ಚನ್ನರಾಯಪಟ್ಟಣ: ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೊಸಳೆಹೊಸಹಳ್ಳಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಚನ್ನರಾಯಪಟ್ಟಣ ತಾಲೂಕು ಘಟಕದ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲೂಕು ಘಟಕದ ಸಭಾಪತಿ ಎಚ್.ಜಿ. ಭರತ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೇ 8ರಂದು ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವನ್ನು ವಿಶ್ವ ರೆಡ್ ಕ್ರಾಸ್ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಯ ಹಿನ್ನೆಲೆ ವಿವರಿಸಿದ ಅವರು, 1859ರಲ್ಲಿ ನಡೆದ ಸೋಲ್ಫೆರಿನೊ ಯುದ್ಧದಲ್ಲಿ ಸಾವಿರಾರು ಯೋಧರು ಮತ್ತು ಗಾಯಾಳುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಹಾಗೂ ರಕ್ತ ದೊರೆಯದೇ ಜೀವಹಾನಿ ಸಂಭವಿಸಿದ ಘಟನೆ ಜೀನ್ ಹೆನ್ರಿ ಅವರನ್ನು ತೀವ್ರವಾಗಿ ಕಾಡಿತು. ಇದೇ ಕಾರಣದಿಂದ 1863ರಲ್ಲಿ ಸ್ವಿಜರ್ಲ್ಯಾಂಡ್ನಲ್ಲಿ ಇಂಟರ್ನ್ಯಾಷನಲ್ ಕಮಿಟಿ ಆಫ್ ದ ರೆಡ್ ಕ್ರಾಸ್ (ICRC) ಸ್ಥಾಪನೆಯಾಯಿತು ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆ ಮಾನವೀಯತೆ, ಸೇವಾ ಮನೋಭಾವ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ಯುದ್ಧ, ಪ್ರಕೃತಿ ವಿಕೋಪ, ಮಹಾಮಾರಿ ಸಂದರ್ಭಗಳಲ್ಲಿ ಆರೋಗ್ಯ ಸೇವೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ವಿವರಿಸಿದರು.

ವಿಶೇಷವೆಂದರೆ ರೆಡ್ ಕ್ರಾಸ್ ಸಂಸ್ಥೆ ಎರಡು ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಏಕೈಕ ಸಂಸ್ಥೆಯಾಗಿದ್ದು, 1901ರಲ್ಲಿ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿ ಸ್ವೀಕರಿಸಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ಕಾರ್ಯದರ್ಶಿ ಸಿ.ಎನ್. ಜಬಿವುಲ್ಲಾ ಬೇಗ್, ನಮ್ಮ ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಗಳ ಮೂಲಕ ನೆರವು ನೀಡಲಾಗಿದೆ. ಚನ್ನರಾಯಪಟ್ಟಣ ತಾಲೂಕು ಘಟಕದಿಂದ ಸುಮಾರು 9000ಕ್ಕೂ ಹೆಚ್ಚು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ರಂಗಸ್ವಾಮಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಯಾವುದೇ ಜಾತಿ, ಧರ್ಮ ಹಾಗೂ ರಾಜಕೀಯ ಭೇದವಿಲ್ಲದೆ ಸಮಾಜ ಸೇವೆ ಸಲ್ಲಿಸುತ್ತಿರುವ ಮಾದರಿ ಸಂಸ್ಥೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಉದಯ್ ಶಂಕರ್, ಖಜಾಂಚಿ ಕಿಶೋರ್ ಕುಮಾರ್ ಸಿ.ಎಸ್., ಕಾಲೇಜು ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ಭಾಗ್ಯಲಕ್ಷ್ಮಿ ಆರ್., ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ
