ಬೆಂಗಳೂರು, ಸೆ. 28, 2026: ಜಾಗತಿಕ ಇಂಧನ ಸಂಸ್ಥೆ ಚೆವ್ರಾನ್ನ ಎಂಜಿನಿಯರಿಂಗ್ ಆ್ಯಂಡ್ ಇನ್ನೋವೇಶನ್ ಎಕ್ಸಲೆನ್ಸ್ ಸೆಂಟರ್ (ಎಂಜಿನ್) ಮತ್ತು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಮದ್ರಾಸ್) ಜಂಟಿಯಾಗಿ ಚೆವ್ರಾನ್ – ಐಐಟಿಎಂ ಎನರ್ಜಿ ಟೆಕ್ನಾಲಜಿ ಇನ್ಕ್ಯುಬೇಷನ್ ಪ್ರೋಗ್ರಾಂಗೆ ಅಧಿಕೃತ ಚಾಲನೆ ನೀಡಿವೆ.
ಈ ವಿಶೇಷ ಯೋಜನೆಯು ಇಂಧನ ತಂತ್ರಜ್ಞಾನಗಳು, ಮೂಲಸೌಕರ್ಯ, ಇಂಗಾಲದ ಮರುಬಳಕೆ, ವೃತ್ತಾಕಾರದ ಆರ್ಥಿಕತೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ದಕ್ಷ ಬಳಕೆಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಆರಂಭಿಕ ಹಂತದ ಆವಿಷ್ಕಾರಕರು, ಸಂಶೋಧಕರು ಮತ್ತು ಸಾಮಾಜಿಕ ಉದ್ಯಮಿಗಳಿಗೆ ಸಮಗ್ರ ಬೆಂಬಲ ಒದಗಿಸಲಿದೆ. ಆಯ್ಕೆಯಾದ ನವೋದ್ಯಮಿಗಳಿಗೆ ಐಐಟಿ ಮದ್ರಾಸ್ನ ಸುಸ್ಥಾಪಿತ ಸಂಶೋಧನೆ ಮತ್ತು ಇನ್ಕ್ಯುಬೇಷನ್ ಪರಿಸರ ವ್ಯವಸ್ಥೆಯ ನೆರವಿನೊಂದಿಗೆ ಆರಂಭಿಕ ಹಂತದ ಪ್ರಿ-ಇನ್ಕ್ಯುಬೇಷನ್ ನೆರವು, ತಜ್ಞರ ತಾಂತ್ರಿಕ ಮಾರ್ಗದರ್ಶನ, ಪ್ರಾಯೋಗಿಕ ಮಾದರಿ ಉತ್ಪನ್ನ ಸಿದ್ಧಪಡಿಸಲು ಅನುದಾನ ಹಾಗೂ ಉದ್ಯಮಶೀಲತೆಯ ಸಮಗ್ರ ಮಾರ್ಗದರ್ಶನ ಲಭ್ಯವಾಗಲಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಚೆವ್ರಾನ್ ಇಂಡಿಯಾದ ಕಂಟ್ರಿ ಹೆಡ್ ಡಾ. ಅಕ್ಷಯ್ ಸಾಹ್ನಿ ಅವರು, “ಈ ನೂತನ ಯೋಜನೆಯು ಹೊಸ ಅವಕಾಶಗಳಿಗೆ ಮುಕ್ತವಾಗಿ ರೆಕ್ಕೆ ನೀಡುವ ಉದ್ದೇಶ ಹೊಂದಿರುವ ನಮ್ಮ ಸಮುದಾಯ ಸಹಭಾಗಿತ್ವದ ಚೆವ್ರಾನ್ ಉಡಾನ್ ಯೋಜನೆಯ ಅತ್ಯಂತ ಪ್ರಮುಖ ಭಾಗವಾಗಿದೆ.
ಪ್ರಸ್ತುತ ಎದುರಾಗುತ್ತಿರುವ ಹಾಗೂ ಭವಿಷ್ಯದಲ್ಲಿ ತಲೆದೋರಲಿರುವ ಜಾಗತಿಕ ಶಕ್ತಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಚೆವ್ರಾನ್ ಎಂಜಿನ್ ಭಾರತದ ಆಳವಾದ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಪ್ರತಿಭೆಯನ್ನು ಸಂಸ್ಥೆಯ ಜಾಗತಿಕ ಸಂಪನ್ಮೂಲ ಮತ್ತು ಪರಿಣತಿಯೊಂದಿಗೆ ಬೆಸೆಯುತ್ತದೆ. ಐಐಟಿ ಮದ್ರಾಸ್ ಜೊತೆಗಿನ ಈ ನೂತನ ಪಾಲುದಾರಿಕೆಯ ಮೂಲಕ ನಾವು ಇಂಧನ ಕ್ಷೇತ್ರಕ್ಕೆ ಸುಸ್ಥಿರ ಹಾಗೂ ಪ್ರಾಯೋಗಿಕ ಪರಿಹಾರಗಳನ್ನು ರೂಪಿಸುತ್ತಿರುವ ವಿದ್ಯಾರ್ಥಿ ಸಂಶೋಧನಾ ತಂಡಗಳು, ತಜ್ಞರು ಮತ್ತು ಸಾಮಾಜಿಕ ಉದ್ಯಮಿಗಳಿಗೆ ನೇರ ಬೆಂಬಲ ಒದಗಿಸುತ್ತಿದ್ದೇವೆ.
ತಾಂತ್ರಿಕ ಮಾರ್ಗದರ್ಶನ, ಉದ್ಯಮಶೀಲತೆಯ ಬೆಂಬಲ ಹಾಗೂ ಪ್ರಾಯೋಗಿಕ ಉದ್ಯಮ ದೃಷ್ಟಿಕೋನಗಳನ್ನು ಒಂದೆಡೆ ಸಂಯೋಜಿಸುವ ಮೂಲಕ ಭವಿಷ್ಯಕ್ಕೆ ಸನ್ನದ್ಧವಾದ ಪ್ರತಿಭೆಗಳನ್ನು ಬೆಳೆಸಲು ಮತ್ತು ಕೈಗೆಟುಕುವ, ವಿಶ್ವಾಸಾರ್ಹ ಹಾಗೂ ಸದಾ ಸ್ವಚ್ಛವಾದ ಇಂಧನ ಪೂರೈಕೆಗೆ ಕೊಡುಗೆ ನೀಡುವ ಮಹತ್ವದ ಆಲೋಚನೆಗಳು ಹೊರಹೊಮ್ಮುವುದನ್ನು ನೋಡಲು ನಾವು ಆಶಿಸುತ್ತೇವೆ” ಎಂದು ವಿವರಿಸಿದರು.
ಚೆವ್ರಾನ್ ಎಂಜಿನ್ ಜೊತೆಗಿನ ಒಡಂಬಡಿಕೆಯ ಮಹತ್ವದ ಕುರಿತು ಅಭಿಪ್ರಾಯ ಹಂಚಿಕೊಂಡ ಐಐಟಿ ಮದ್ರಾಸ್ನ ಅಲುಮ್ನಿ ಮತ್ತು ಕಾರ್ಪೊರೇಟ್ ರಿಲೇಶನ್ಸ್ ವಿಭಾಗದ ಡೀನ್ ಪ್ರೊ. ಅಶ್ವಿನ್ ಮಹಾಲಿಂಗಂ ಅವರು, “ಚೆವ್ರಾನ್ – ಐಐಟಿಎಂ ಇಂಧನ ತಂತ್ರಜ್ಞಾನ ಇನ್ಕ್ಯುಬೇಷನ್ ಕಾರ್ಯಕ್ರಮದ ಮೂಲಕ ಆವಿಷ್ಕಾರಕರಿಗೆ ಸೂಕ್ತ ಮಾರ್ಗದರ್ಶನ, ತಾಂತ್ರಿಕ ಪರಿಣತಿ ಹಾಗೂ ಬಲಿಷ್ಠ ಆವಿಷ್ಕಾರ ವೇದಿಕೆಯನ್ನು ಜಂಟಿಯಾಗಿ ಕಲ್ಪಿಸಿಕೊಟ್ಟು, ಭರವಸೆಯ ಆಲೋಚನೆಗಳನ್ನು ಪ್ರಾಯೋಗಿಕ ಪರಿಹಾರಗಳನ್ನಾಗಿ ಪರಿವರ್ತಿಸಲು ನಾವು ಉದ್ದೇಶಿಸಿದ್ದೇವೆ. ವಾಸ್ತವಿಕ ಜಗತ್ತಿನ ಜಟಿಲ ಶಕ್ತಿ ಸವಾಲುಗಳನ್ನು ಬಗೆಹರಿಸಲು ಆಧುನಿಕ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಬಳಸಿಕೊಳ್ಳುವ ನಮ್ಮ ದೂರದೃಷ್ಟಿಯನ್ನು ಸಾಕಾರಗೊಳಿಸಲು ಇಂತಹ ಕಾರ್ಯತಂತ್ರದ ಪಾಲುದಾರಿಕೆಗಳು ಅತ್ಯಂತ ಸಹಕಾರಿಯಾಗಲಿವೆ” ಎಂದು ತಿಳಿಸಿದರು.
ಈ ಯೋಜನೆಯ ಅಂಗವಾಗಿ ಚೆವ್ರಾನ್ ಎಂಜಿನ್ ಸಂಸ್ಥೆಯು ಉದ್ಯಮ ಪರಿಣತಿ, ತಾಂತ್ರಿಕ ಮಾರ್ಗದರ್ಶನ, ಉದ್ಯೋಗಿ ಸ್ವಯಂಸೇವಕ ನೆರವು ಮತ್ತು ಆವಿಷ್ಕಾರಕರೊಂದಿಗೆ ನೇರ ಒಡನಾಟದ ಅವಕಾಶಗಳನ್ನು ಕಲ್ಪಿಸಲಿದೆ. ಅದೇ ವೇಳೆ ಐಐಟಿ ಮದ್ರಾಸ್ ತನ್ನ ಸಂಶೋಧನೆ, ಆವಿಷ್ಕಾರ ಮತ್ತು ಇನ್ಕ್ಯುಬೇಷನ್ ಕೇಂದ್ರದ ಪ್ರವೇಶಾವಕಾಶವನ್ನು ನೀಡಲಿದ್ದು, ನವೋದ್ಯಮಿಗಳು ಭರವಸೆಯ ಇಂಧನ ತಂತ್ರಜ್ಞಾನಗಳನ್ನು ಮುಕ್ತವಾಗಿ ಅಭಿವೃದ್ಧಿಪಡಿಸಲು, ಪರೀಕ್ಷಿಸಲು ಹಾಗೂ ಮಾರುಕಟ್ಟೆ ಮಟ್ಟದಲ್ಲಿ ವಿಸ್ತರಿಸಲು ಪೂರಕವಾದ ವೇದಿಕೆಯನ್ನು ನಿರ್ಮಿಸಿಕೊಡಲಿದೆ.
ಐಐಟಿ ಮದ್ರಾಸ್ ಜೊತೆಗಿನ ಚೆವ್ರಾನ್ನ ನಿರಂತರ ಸಂಬಂಧಕ್ಕೆ ಈ ಕಾರ್ಯಕ್ರಮದ ಚಾಲನೆಯು ಹೊಸ ಬಲ ತುಂಬಿದ್ದು, ಕಾರ್ಯತಂತ್ರದ ಸಮುದಾಯ ಪಾಲುದಾರಿಕೆಗಳ ಮೂಲಕ ಹೊಸ ಆವಿಷ್ಕಾರ, ಉನ್ನತ ಶಿಕ್ಷಣ ಮತ್ತು ಸಾಮರ್ಥ್ಯ ವೃದ್ಧಿಗೆ ಬೆಂಬಲ ನೀಡುವ ಬದ್ಧತೆಯನ್ನು ಎತ್ತಿಹಿಡಿದಿದೆ.
ಚೆವ್ರಾನ್ ಎಂಜಿನ್ ಹಾಗೂ ಐಐಟಿ ಮದ್ರಾಸ್ ಎರಡೂ ಸಂಸ್ಥೆಗಳು ಜೊತೆಗೂಡಿ ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಭವಿಷ್ಯದ ಇಂಧನ ತಂತ್ರಜ್ಞಾನ ಕ್ಷೇತ್ರದ ನಾಯಕರನ್ನು ರೂಪಿಸುವ ಗುರಿಯನ್ನು ಹೊಂದಿವೆ.
