ಬೆಂಗಳೂರು, ಆ.3: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಶಾಸಕರ ಹೆಸರಿನ ಜೊತೆಗೆ ವಿಧಾನಸಭೆಯ ಸಭಾಧ್ಯಕ್ಷ, ಉಪಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಸಭಾಪತಿ, ಉಪಸಭಾಪತಿ ಹುದ್ದೆಗಳ ಉಲ್ಲೇಖ ಕಾಂಗ್ರೆಸ್ ಪಕ್ಷದ ಪತ್ರಶೀರ್ಷಿಕೆಯಲ್ಲಿ (ಲೆಟರ್ಹೆಡ್) ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ S. Suresh Kumar, ಕಾಂಗ್ರೆಸ್ ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ಟೀಕಿಸಿದ್ದಾರೆ.
ಸಭಾಧ್ಯಕ್ಷ, ಉಪಸಭಾಧ್ಯಕ್ಷ, ಸಭಾಪತಿ ಹಾಗೂ ಉಪಸಭಾಪತಿ ಹುದ್ದೆಗಳು ಯಾವುದೇ ರಾಜಕೀಯ ಪಕ್ಷದ ವ್ಯಾಪ್ತಿಗೆ ಸೀಮಿತವಾಗದ, ನಿಷ್ಪಕ್ಷಪಾತ ಸಾಂವಿಧಾನಿಕ ಹುದ್ದೆಗಳಾಗಿವೆ. ಇಂತಹ ಹುದ್ದೆಗಳ ಹೆಸರನ್ನು ಪಕ್ಷದ ಅಧಿಕೃತ ಲೆಟರ್ಹೆಡ್ನಲ್ಲಿ ಬಳಸಿರುವುದು ಅವುಗಳ ಘನತೆ ಮತ್ತು ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವಂತದ್ದು ಎಂದು ಅವರು ಆರೋಪಿಸಿದ್ದಾರೆ.
ಮುಂದೆ ಆಯ್ಕೆಯಾಗಬೇಕಿರುವ ಸಾಂವಿಧಾನಿಕ ಹುದ್ದೆಗಳ ಹೆಸರುಗಳನ್ನು ಪಕ್ಷದ ಲೆಟರ್ಹೆಡ್ನಲ್ಲಿ ಉಲ್ಲೇಖಿಸಿರುವುದು ಇದೇ ಮೊದಲ ಬಾರಿಗೆ ಕಂಡುಬಂದಿದೆ ಎಂದು ಹೇಳಿರುವ ಅವರು, ಇದು ಸಂಸದೀಯ ಸಂಪ್ರದಾಯ ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನದ ರಕ್ಷಣೆ ಬಗ್ಗೆ ಮಾತನಾಡುವ ಕಾಂಗ್ರೆಸ್, ಆಚರಣೆಯಲ್ಲಿ ಸಾಂವಿಧಾನಿಕ ಸಂಸ್ಥೆಗಳು ಹಾಗೂ ಉನ್ನತ ಹುದ್ದೆಗಳನ್ನು ಪಕ್ಷದ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನೂ ಎಸ್. ಸುರೇಶ್ ಕುಮಾರ್ ಮಾಡಿದ್ದಾರೆ.
ಈ ಆರೋಪಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.
