ಬೆಂಗಳೂರು, ಜು. 21: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಬಂಧಿಯಾಗಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಒಳ ಸಂದರ್ಶನ (ಇಂಟರ್ನಲ್ ಇಂಟರ್ವ್ಯೂ) ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ಒಳ ಸಂದರ್ಶನಕ್ಕೆ ಅವಕಾಶ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಹಿಂದೆ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಅರ್ಜಿಯನ್ನು ಮಾನ್ಯಗೊಳಿಸಿ, ಜೈಲು ನಿಯಮಾವಳಿಗೆ ಅನುಗುಣವಾಗಿ ಭೇಟಿಗೆ ಅವಕಾಶ ಕಲ್ಪಿಸುವಂತೆ ಆದೇಶ ಹೊರಡಿಸಿದೆ.
ನ್ಯಾಯಾಲಯದ ಆದೇಶದಂತೆ, ಜೈಲು ಮುಖ್ಯ ಅಧೀಕ್ಷಕರು ಕಾರಾಗೃಹ ನಿಯಮಾವಳಿಯ ಪ್ರಕಾರ ಪ್ರಜ್ವಲ್ ರೇವಣ್ಣ ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಅವರನ್ನು ಭೇಟಿ ಮಾಡಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಜೈಲು ಆಡಳಿತವು ನಿಗದಿತ ನಿಯಮಗಳು ಹಾಗೂ ಸಮಯದಂತೆ ಭೇಟಿಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ. ನ್ಯಾಯಾಲಯದ ಆದೇಶದಂತೆ ಭೇಟಿ ವ್ಯವಸ್ಥೆ ಸಂಪೂರ್ಣವಾಗಿ ಕಾರಾಗೃಹ ನಿಯಮಾವಳಿಯ ವ್ಯಾಪ್ತಿಯಲ್ಲಿಯೇ ನಡೆಯಲಿದೆ.
