ತುಮಕೂರು, ಜು. 8: ಕಾಮನ್ವೆಲ್ತ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಅಂತಾರಾಷ್ಟ್ರೀಯ ಚೆಸ್ ಪ್ರತಿಭೆ, ಬೆಂಗಳೂರಿನ ನಕ್ಷತ್ರ ಗುಮದವಲ್ಲಿ ಅವರು ತುಮಕೂರಿನ ಎಸ್ಎಸ್ಐಟಿ ಪ್ರವಾಸಿ ಮಂದಿರದಲ್ಲಿ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದರು.
ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್. ಮಧುಕರ್ ಅವರ ಉಪಸ್ಥಿತಿಯಲ್ಲಿ ನಡೆದ ಭೇಟಿಯಲ್ಲಿ, ಕೇವಲ 9ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ನಕ್ಷತ್ರ ಅವರ ಪ್ರತಿಭೆಯನ್ನು ಡಾ. ಪರಮೇಶ್ವರ್ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಕ್ಷತ್ರ ಅವರಂತಹ ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಬೇಕಾದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಭೇಟಿಯ ವೇಳೆ ಹಿರಿಯ ಪತ್ರಕರ್ತರಾದ ಚಿ.ನಿ. ಪುರುಷೋತ್ತಮ್, ಹರೀಶ್ ಆಚಾರ್ಯ, ನಿಖೇತ್ ರಾಜ್ ಮೌರ್ಯ, ಪ್ರೊ. ಎಂ. ವೆಂಕಟೇಶ್ವರಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
